

ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಭಯದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ತಂದಿಳಿಸಿದ ಏರ್ ಇಂಡಿಯಾ ಸಿಬ್ಬಂದಿಗಳಿಗೆ ಸಂಸ್ಥೆಯು ಒಂದು ಸಿಹಿ ಸುದ್ದಿಯನ್ನು ನೀಡಿದೆ. ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗಳಿಗೆ ಒಂದು ವಾರದ ಕಾಲ ರಜೆ ನೀಡಲಾಗಿದೆ.
ಶನಿವಾರ ಮತ್ತು ಭಾನುವಾರದಂದು ಎರಡು ವಿಶೇಷ ವಿಮಾನಗಳು ಚೀನಾದ ವುಹಾನ್ನಿಂದ ಭಾರತಕ್ಕೆ ಬಂದಿಳಿದಿವೆ. ಅದರಲ್ಲಿ ಏಳು ಮಾಲ್ಡೀವ್ಸ್ ನಾಗರಿಕರು ಸೇರಿದಂತೆ ಒಟ್ಟು 647 ಜನರು ಭಾರತಕ್ಕೆ ಬಂದಿಳಿದಿದ್ದಾರೆ. ಈ ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಕರೆ ತರಲು ಒಟ್ಟು 60 ಜನರ ವಿಶೇಷ ತಂಡ ಹೋಗಿತ್ತು. 30 ಜನ ಕ್ಯಾಬಿನ್ ಕ್ರ್ಯೂಗಳು, 10 ಕಮರ್ಷಿಯಲ್ ಸ್ಟಾಫ್ಗಳು, 8 ಪೈಲೆಟ್ಗಳು ಒಬ್ಬ ಹಿರಿಯ ಅಧಿಕಾರಿ ಇದರಲ್ಲಿ ಭಾಗಿಯಾಗಿದ್ದರು. ವಿಶೇಷ ಕಾರ್ಯಾಚರಣೆಯ ಮೂಲಕ ಸ್ವದೇಶಕ್ಕೆ ಜನರನ್ನು ಕರೆತಂದಿರುವ ಈ ತಂಡಕ್ಕೆ ಅಭಿನಂದಿಸಲಾಗಿದ್ದು, ಒಂದು ವಾರದ ಕಾಲ ಇವರೆಲ್ಲರಿಗು ರಜೆ ನೀಡಿರುವುದಾಗಿ ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ವಿಶೇಷ ತಂಡದ ನೇತೃತ್ವವನ್ನು ಏರ್ ಇಂಡಿಯಾದ ನಿರ್ದೇಶಕ ಕ್ಯಾಪ್ಟನ್ ಅಮಿತಾಬ್ ಸಿಂಗ್ ವಹಿಸಿಕೊಂಡಿದ್ದರು. (ಏಜೆನ್ಸೀಸ್)