

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಪ್ರವೇಶ ವಯೋಮಿತಿ ಗೊಂದಲಕ್ಕೆ ತೆರೆ ಎಳೆದಿರುವ ಶಿಕ್ಷಣ ಇಲಾಖೆ, ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ನಿಗದಿ ಮಾಡಿದೆ. ಈ ಶೈಕ್ಷಣಿಕ ವರ್ಷ ಈಗಾಗಲೇ ಮುಕ್ತಾಯವಾಗಿದ್ದರೂ 2023-24ರಿಂದ 2025-26ನೇ ವರ್ಷದವರೆಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ನಿಗದಿ ಮಾಡಿದೆ.
ಪರಿಷ್ಕೃತ ಆದೇಶದ ಪ್ರಕಾರ, ಮುಂದಿನ ಶೈಕ್ಷಣಿಕ ವರ್ಷ 2025-26ನೇ ಸಾಲಿಗೆ 1ನೇ ತರಗತಿ ಪ್ರವೇಶಕ್ಕೆ 6ರಿಂದ 8 ವರ್ಷದವರೆಗೆ ಅವಕಾಶ ಕಲ್ಪಿಸಿದೆ.
2012ರಲ್ಲಿ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿ ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿತ್ತು. ಆನಂತರ ಎಲ್ಕೆಜಿ, ಯುಕೆಜಿ ಮತ್ತು 1ನೇ ತರಗತಿ ಪ್ರವೇಶಕ್ಕೆ ಈಗಾಗಲೇ ದಾಖಲಾತಿ ಕನಿಷ್ಠ ಅರ್ಹ ವಯೋಮಿತಿ ಪರಿಷ್ಕರಿಸಿದೆ. ಆದರೆ, ಗರಿಷ್ಠ ವಯೋಮಾನ ಪರಿಷ್ಕರಿಸಿರಲಿಲ್ಲ. ಗರಿಷ್ಠ ವಯೋಮಿತಿ ನಿಗದಿ ಮಾಡದೇ ಇರುವುದರಿಂದ ಡ್ರಾಪ್ಔಟ್ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು ಎಂದು ಮನಗಂಡು, ಆದೇಶ ಪರಿಷ್ಕರಿಸಲಾಗಿದೆ.
ಈಗಾಗಲೇ 2023-24ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮುಗಿದಿದೆ. 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಗತಿಯಲ್ಲಿದೆ. 2025-26ನೇ ಸಾಲಿನ ಪ್ರಕ್ರಿಯೆಗೆ ಕೇವಲ 1ನೇ ತರಗತಿಗೆ ಮಾತ್ರ ಸೂಚಿಸಿದೆ. ಆದರೆ, ಪೂರ್ವ ಪ್ರಾಥಮಿಕ ಶಾಲೆಗೆ ಇರಬೇಕಿರುವ ವಯೋಮಿತಿ ಬಗ್ಗೆ ತಿಳಿಸಿಲ್ಲ.
2023-24ರಲ್ಲಿ ಎಲ್ಕೆಜಿಗೆ 4-6 ವರ್ಷ, ಯುಕೆಜಿಗೆ 5-7 ವರ್ಷ, 1ನೇ ತರಗತಿಗೆ 6-8 ವರ್ಷ ವಯೋಮಿತಿ ನಿಗದಿ ಮಾಡಿದೆ. ಶಿಕ್ಷಣ ಇಲಾಖೆ ಯಾವುದೇ ಪ್ರವೇಶ ಪ್ರಕ್ರಿಯೆ ಆರಂಭಕ್ಕೂ ಮುನ್ನ ನೀಡುವುದು ಉತ್ತಮ. ಆದರೆ, ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಈ ವೇಳೆಯಲ್ಲಿ ಆದೇಶ ಹೊರಡಿಸಿ ಯಾವುದೇ ಪ್ರಯೋಜನವಿಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.