

Actress: ಯಾವುದೇ ಒಂದು ಕೆಲಸ ಕೈಗೆತ್ತಿಕೊಂಡರೆ ಅದರಲ್ಲಿ ಯಶಸ್ಸು ನೋಡುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ ಬಿಡಿ. ಯಾಕಂದ್ರೆ, ಒಂದು ಸಣ್ಣ ಕೆಲಸವೇ ಆಗಲಿ ಅಥವಾ ದೊಡ್ಡ ಕಾರ್ಯವೇ ಆಗಲಿ ಅದನ್ನು ಒಮ್ಮೆ ಮಾಡಬೇಕು ಎಂದು ದೃಢ ಮನಸ್ಸಿನಿಂದ ನಿರ್ಧರಿಸಿದರೂ ಕೆಲವೊಮ್ಮೆ ಅದೃಷ್ಟ ಒಲಿಯುವುದಿಲ್ಲ. ಇನ್ನು ಕೆಲವು ಬಾರಿ ಸಮಯ ಕೂಡ ಕೈಕೊಡುತ್ತದೆ. ಅದೇ ರೀತಿ ಇಲ್ಲೊಬ್ಬ ಖ್ಯಾತ ನಟಿ, ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದು ತನ್ನ ಕೀರ್ತಿಯನ್ನು ಪಸರಿಸುವ ಮುನ್ನ ತನ್ನ ಕುಟುಂಬಕ್ಕೆ ಬಂದ ಕಷ್ಟದಿಂದ ಕೇವಲ 50 ರೂ.ಗೂ ಒದ್ದಾಡಿದ ಘಟನೆ ಖಂಡಿತ ಓದುಗರನ್ನು ಅಚ್ಚರಿಗೆ ದೂಡಲಿದೆ.
ಸಾಧನೆಯ ಉತ್ತುಂಗಕ್ಕೇರಲು ವರ್ಷಗಳ ಸಂಕಲ್ಪ ಬೇಕೇ ಬೇಕು ಎಂಬ ಮಾತು ಸತ್ಯ. ಅದೇ ರೀತಿ, ಇಂದು ಸೂಪರ್‌ಸ್ಟಾರ್ ಎಂದು ಕರೆಯಲ್ಪಡುವ ಈ ಸ್ಟಾರ್ ನಟಿ, ತಂದೆಯ ಹೆಸರಿದ್ದರೂ ತನ್ನದೇ ಕೀರ್ತಿ, ಹೆಸರನ್ನು ಗಳಿಸಲು ಹಲವಾರು ವರ್ಷಗಳ ನಿರಂತರ ಶ್ರಮವನ್ನು ಪಡಬೇಕಾಯಿತು. ಇಂದು ಸೀರಿಯಲ್ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿ, ಹಿಂದಿ ಟೆಲಿವಿಷನ್ ಆಳುತ್ತಿರುವ ನಟಿ, ಒಂದು ಸಮಯದಲ್ಲಿ ಹಣ ಉಳಿಸಲು 15 ಕಿ.ಮೀ ದೂರ ನಡೆದುಕೊಂಡೇ ಪ್ರಯಾಣಿಸುತ್ತಿದ್ದರು. ಅಷ್ಟಕ್ಕೂ ಯಾರು ಈ ನಟಿ? ಇವರ ತಂದೆ ಯಾರು? ಅವರ ಕುಟುಂಬವೇಕೆ ಕಷ್ಟಕ್ಕೆ ಸಿಲುಕಿತು? ಎಂಬ ಹತ್ತಾರು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ಭಾರತದ ಟೆಲಿವಿಷನ್ ಲೋಕದಲ್ಲಿ ತಮ್ಮ ನಟನೆಯಿಂದಲೇ ಮನೆ ಮನೆಗೂ ತಲುಪಿದ ನಟಿ ರೂಪಾಲಿ ಗಂಗೂಲಿ, ಇಂದು ಸೀರಿಯಲ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯಾಗಿ ಹೊರಹೊಮ್ಮಿದ್ದಾರೆ. ರೂಪಾಲಿ ಅವರ ತಂದೆ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಅನಿಲ್ ಗಂಗೂಲಿ. ಹಲವು ಸಿನಿಮಾಗಳಲ್ಲಿ ಒಳ್ಳೆಯ ಆದಾಯವನ್ನು ಗಳಿಸಿದ್ದರು. ಆದ್ರೆ, ಒಂದು ದೊಡ್ಡ ಹೊಡೆತದಿಂದ ತಮ್ಮ ಬಳಿಯಿದ್ದ ಎಲ್ಲಾ ಹಣವನ್ನು ಕಳೆದುಕೊಂಡರು.
ಸಿನಿಮಾ ಪೂರ್ಣಗೊಳಿಸಲು ಹಣವಿಲ್ಲದ ಸಮಯದಲ್ಲಿ ತಮ್ಮ ವೈಯಕ್ತಿಕ ಆಸ್ತಿಯನ್ನೇ ಬಳಿಸಿಕೊಂಡ ಗಂಗೂಲಿ ಅವರು, ತದನಂತರ ಭಾರೀ ನಷ್ಟವನ್ನು ಅನುಭವಿಸಿದರು. ಈ ಘಟನೆಗಳಿಂದ ಬೇಸರಗೊಂಡ ರೂಪಾಲಿ, ತನ್ನ ಕುಟುಂಬ ಕಷ್ಟದ ಪರಿಸ್ಥಿತಿಯಲ್ಲಿರುವುದುನ್ನು ಕಂಡು ಕಣ್ಣೀರಿಟ್ಟಿದ್ದು ಉಂಟು. ಎಲ್ಲವನ್ನೂ ಕಳೆದುಕೊಂಡು ಓಡಾಡಲು ಕೂಡ ಅವರ ಬಳಿ ಹಣವಿಲ್ಲದ ಸ್ಥಿತಿ ಎದುರಾಗಿತ್ತು. ಆರ್ಥಿಕ ಒತ್ತಡ ಹೆಚ್ಚಿದ್ದರಿಂದ ಆಕೆಯ ತಂದೆಗೆ ಮಧುಮೇಹ ಕೂಡ ಆವರಿಸಿತ್ತು.
ಕುಟುಂಬವು ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ, ರೂಪಾಲಿ ರಂಗಭೂಮಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಹಣ ಉಳಿಸುವ ಸಲುವಾಗಿ 15 ಕಿಮೀ ನಡೆಯುತ್ತಿದ್ದ ನಟಿ, ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾದರು. “ಹಣವನ್ನು ಉಳಿಸಲು ನಾನು ವರ್ಲಿಯಿಂದ ಜುಹುವಿನ ಪೃಥ್ವಿ ಥಿಯೇಟರ್‌ಗೆ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಮೊದಲ ನಾಟಕಕ್ಕೆ ನನಗೆ ಸಿಕ್ಕಿದ್ದು ಕೇವಲ 50 ರೂ. ಪೃಥ್ವಿ ಥಿಯೇಟರ್‌ನಲ್ಲಿ ನನ್ನ ಮೊದಲ ನಾಟಕ ಆತ್ಮಕಥೆಯನ್ನು ದಿನೇಶ್ ಠಾಕೂರ್ ನಿರ್ಮಿಸಿದ್ದರು. ಒಂದು ನಾಟಕಕ್ಕೆ 50 ರೂ. ಜತೆಗೆ ಕೆಲವೊಮ್ಮೆ ಸಮೋಸಾ ಕೂಡ ಸಿಗುತ್ತಿತ್ತು. ಆಗ ಆಗುತ್ತಿದ್ದ ಖುಷಿ ನಿಜಕ್ಕೂ ಹೇಳತೀರದು. ಅದು ಹಣಕ್ಕೂ ಮೀರಿತ್ತು” ಎಂದು ಹೇಳಿದರು.
ಸೀರಿಯಲ್ನ ಪ್ರತಿ ಸಂಚಿಕೆಗೆ ಬರೋಬ್ಬರಿ 3 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಅನುಪಮಾ ಖ್ಯಾತಿಯ ರೂಪಾಲಿ, ಭವ್ಯ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ಪ್ರತಿ ಸಂಚಿಕೆಗೆ 1.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಿಕೊಂಡರು ಎಂದು ವರದಿಗಳು ತಿಳಿಸಿವೆ. ಅನುಪಮಾ ಪಾತ್ರಕ್ಕಿಂತ ಮೊದಲು, ಸಾರಾಭಾಯ್ ವರ್ಸಸ್ ಸಾರಾಭಾಯ್ ಎಂಬ ಸಿಟ್‌ಕಾಮ್‌ನಲ್ಲಿ ಮೋನಿಶಾ ಸಾರಾಭಾಯ್ ಪಾತ್ರದಲ್ಲಿ ರೂಪಾಲಿ ರಾಷ್ಟ್ರವ್ಯಾಪಿ ಜನಪ್ರಿಯತೆಯನ್ನು ಗಳಿಸಿ, ಅಪಾರ ವೀಕ್ಷಕರ ಮನಗೆದ್ದಿದ್ದರು,(ಏಜೆನ್ಸೀಸ್).