

ಜೀವನದ ಗುರಿ ತಲುಪಲು ಅಧ್ಯಾತ್ಮ ಹಿನ್ನೆಲೆಯಲ್ಲಿ ನಿರಾಕಾರ, ನಿರ್ಗಣ, ಸಾಕಾರ, ಸಗುಣ ರೂಪಗಳಲ್ಲಿ ಅರ್ಚಿಸಬಹುದು. ಈ ತೆರನಾದ ಅರ್ಚನೆ, ಆರಾಧನೆ ಇತ್ಯಾದಿ ಋಗ್ವೇದ ಕಾಲದಿಂದಲೂ ಬಂದಿದೆ. ವಿಗ್ರಹಾರಾಧನೆ, ಚಿಹ್ನೆಗಳು, ಪ್ರತೀಕಗಳು ಇತ್ಯಾದಿ ಪೂಜಾರ್ಹವಾದ ಪದ್ದತಿಗಳು. ಈ ಸಂದರ್ಭದಲ್ಲಿ ಮಾನಸಪೂಜೆ, ಬಾಹ್ಯಪೂಜೆಗಳೂ ಒಳಗೊಂಡಿದೆ.
ಆಧ್ಯಾತ್ಮ ಪೂಜಾ ಎಂದಲ್ಲಿ ಪೂಜಿಸುವ ವಸ್ತು, ಅಂದರೆ ವಿಗ್ರಹ, ಪಟ, ಪ್ರತೀಕಗಳನ್ನು ಕೇವಲ ಪೂಜಾರ್ಹ ವಸ್ತುಗಳು ಎಂಬುದನ್ನು ಬಿಟ್ಟು ಆ ಪರಬ್ರಹ್ಮ ವಸ್ತು ಈ ಪೂಜಾ, ಆರಾಧನಾ ಪ್ರತಿರೂಪಗಳಲ್ಲಿ ಜೀವಂತವಾಗಿ ಗೋಚರಿಸುವಂತೆ ಮನಸ್ಸನ್ನು ಊರ್ಧ್ವಮುಖವಾಗಿ ಕ್ರಮೇಣ, ಕ್ರಮೇಣವಾಗಿ ಏರುವಂತಾಗಿಸಬೇಕು. ಪರಮಹಂಸರು ಒಮ್ಮೆ ಸಂಭಾಷಿಸುತ್ತಿರುವಾಗ ಭಕ್ತನೊಬ್ಬ ಭವತಾರಿಣಿಯ ಪ್ರತಿಮೆ ಎಂದು ಸಂಭೋಧಿಸುತ್ತಾನೆ. ಆಗ ರಾಮಕೃಷ್ಣರು ಆ ಮಾತನ್ನು ತಿದ್ದಿ ‘ಭವತಾರಿಣಿಮಾತಾ’ ಎಂದು ಹೇಳು ಎನ್ನುತ್ತಾರೆ. ಅಂದರೆ ಸಾಮಾನ್ಯರು ಮಾತಾಡುವಂತೆ ವಿಗ್ರಹ, ಪಟ, ಬಿಂಬ, ರೂಪ ಎನ್ನದೆ ಸಾಕ್ಷಾತ್ ಜಗಜ್ಜನನಿಯೇ ಅವರ ಕಣ್ಮುಂದೆ ರಾರಾಜಿಸುತ್ತಿರುವಂತೆ ವಿವರಿಸುತ್ತಾರೆ. ಇದು ನಿಜವಾದ ಅರ್ಥದಲ್ಲಿ ಆರಾಧನೆ, ಅರ್ಚನೆ, ಪೂಜೆ. ಭಾಗವತದಲ್ಲಿ ಈ ರೀತಿಯಾಗಿ ವಿವರಿಸುತ್ತಾರೆ:
ಯದ್ಯದಿಷ್ಟ ತಮಂ ಲೋಕೇ ಯಚ್ಛಾತಿಪ್ರಿಯ ಮಾರ್ತನಃ |
ತತ್ತ ನಿವೇದಯೇತ್ ಮಹ್ಯಂ ತದಾನಂತ್ಯಾಯ ಕಲ್ಪತೆ | (ಭಾಗವತ)
ಮನುಷ್ಯ ತನಗೆ ಅತ್ಯಂತ ಪ್ರಿಯವಾದದ್ದನ್ನು ನನಗೆ ಅರ್ಪಿಸ ಬೇಕು. ಅದರಿಂದ ಅನಂತ ಫಲ ಲಭಿಸುವುದು. ಇಲ್ಲಿ ಅತ್ಯಂತ ಪ್ರಿಯವಾದದ್ದನ್ನು ಸಮರ್ಪಿಸಬೇಕು ಎಂದು ತಿಳಿಸಲಾಗಿದೆ. ಇಲ್ಲಿ ಹೂವಾಗಲಿ, ಫಲ ವಾಗಲೀ, ವಸ್ತ್ರವಾಗಲೀ, ನೈವೇದ್ಯವಾಗಲೀ ಪ್ರತಿಯೊಂದು ಉತ್ಕೃ್ಟವಾದದ್ದನ್ನು ಭಗವದ್ ಶಕ್ತಿಗೆ ಅರ್ಪಿತವಾಗುತ್ತದೆ. ಅರ್ಚಿಸುವವ ಮತ್ತು ಅರ್ಚಿಸಲ್ಪಡುವ ದೈವ ಒಂದು ರೀತಿಯ ಹೃದಯ ಹೃದಯದ ಸಂಬಂಧವನ್ನು ಬೆಳೆಸಿಕೊಂಡಲ್ಲಿ ಮಾತ್ರ ಇದು ಸಾಧ್ಯ.
ರಾಮಕೃಷ್ಣರ ಭವತಾರಿಣಿಯ ಪೂಜಾ ಸಂದರ್ಭವನ್ನು ರಾಷ್ಟ್ರಕವಿ ಕುವೆಂಪು ಹೀಗೆ ಬಣ್ಣಿಸಿದ್ದಾರೆ: ‘ಆ ಅದ್ಭುತ ಸಾಧನಾ, ಆರಾಧನಾ ಸಮಯದಲ್ಲಿ ಶಿಲೆ ಚಿದ್ಘನ ಮೂರ್ತಿಯಾಯಿತು. ವಿಗ್ರಹ ಉಸಿರಾಯಿತು. ಆಗ ಈ ಪರಮಭಕ್ತನಾದ ಭಗವಾನ್ ಪರಮಹಂಸ ಶ್ರೀರಾಮಕೃಷ್ಣರು ಪರೀಕ್ಷೆಗಾಗಿ ಚಿನ್ಮಯಿಯ ನಾಸಿಕದ ಹತ್ತಿರ ಒಂದು ಹುಲ್ಲಿನ ಎಸಳನ್ನು ಅಲ್ಲಾಡಿಸಿದರು! ರಾತ್ರಿ ದೀಪದ ಬೆಳಕಿನಲ್ಲಿ ನೋಡಿದರೆ ವಿಗ್ರಹಕ್ಕೆ ನೆರಳೇ ಇಲ್ಲ! ವಿಗ್ರಹ ಸ್ಥೂಲ ಶಿಲೆಯಾಗಿದ್ದರಲ್ಲವೇ ಅದಕ್ಕೆ ಛಾಯೆ ಇರುವುದು! ಸೂಕ್ಷ್ಮತಮ ಚೇತನವಾದರೆ ಅದಕ್ಕೆ ನೆರಳೆಲ್ಲಿ? ಸರ್ವದಾ ಜ್ಯೋತಿಗೂ ಆಧಾರವಾದ ಜ್ಯೋತಿಗೆ ಛಾಯೆಯುಂಟೇ?’- ಈ ತೆರನಾದ ದಿವ್ಯೋನ್ಮಾದದಲ್ಲಿ ತೇಲಿ ಮುಳುಗುತ್ತಿದ್ದ ಪರಮಹಂಸರು ಸದಾ ಮೃಣ್ಮಯಿಯಲ್ಲಿ ಚಿನ್ಮಯಿಯನ್ನು ಕಂಡು ಆರಾಧಿಸುತ್ತಿದ್ದರು, ಪೂಜಿಸುತ್ತಿದ್ದರು. ಇದೇ ನಿಜವಾದ ಅರ್ಥದಲ್ಲಿ ಆಧ್ಯಾತ್ಮ ಪೂಜೆ.
ಸ್ವಾಮಿ ಬ್ರಹ್ಮಾನಂದಜೀ ಅವರು ವಿವರಿಸಿದಂತೆ, ಬೇರೆ ಬೇರೆ ಮನೋಭಾವದವರ ತೃಪ್ತಿಗಾಗಿ ಶಾಸ್ತ್ರಗಳು ಬೇರೆ ಬೇರೆ ವಿಧದ ಪೂಜೆಯನ್ನು ಹೇಳಿವೆ. ಮೊದಲನೆಯದಾಗಿ ಪ್ರತಿಮಾ ಪೂಜೆ ಅಥವಾ ಪ್ರತೀಕೋಪಾಸನೆ. ಇದಕ್ಕಿಂತ ಉನ್ನತವಾದದ್ದು ಪ್ರಾರ್ಥನೆ ಅಥವಾ ಜಪದ ಮೂಲಕ ದೇವರನ್ನು ಪೂಜಿಸುವುದು. ಇಲ್ಲಿ ಸಾಧಕನು ತನ್ನ ಇಷ್ಟದೇವತೆಯ ದಿವ್ಯರೂಪವನ್ನು ಧ್ಯಾನಿಸುತ್ತಾನೆ, ಅವನನ್ನು ಪ್ರಾರ್ಥಿಸುತ್ತಾನೆ, ಅವನ ನಾಮ ಜಪ ಮಾಡುತ್ತಾನೆ. ಇದಕ್ಕಿಂತಲೂ ಉತ್ತಮವಾದದ್ದು ಧ್ಯಾನ-ನಿರಂತರವಾಗಿ ಮನಸ್ಸನ್ನು ಭಗವಂತನೆಡೆಗೆ ಹರಿಸುವುದು. ಇಂಥ ಪೂಜೆಯಲ್ಲಿ ವ್ಯಕ್ತಿಯು ಇಷ್ಟದೇವತೆಯ ಜೀವಂತ ಸನ್ನಿಧಿಯಲ್ಲಿ ತಲ್ಲೀನನಾಗುತ್ತಾನೆ. ಅದೇ ನಿಜವಾದ ಅಧ್ಯಾತ್ಮ ಪೂಜೆ.
ದುರ್ಗೆ ಮತ್ತು ಗಣೇಶ ಇವರ ವಾರ್ಷಿಕ ಪೂಜೆಯಲ್ಲಿ ಮಣ್ಣಿನ ಪ್ರತಿಮೆಯನ್ನು ಉಪಯೋಗಿಸುತ್ತಾರೆ. ಉತ್ಸವದ ಕೊನೆಯಲ್ಲಿ ಪ್ರತಿಮೆಯನ್ನು ನದಿಯಲ್ಲೋ, ಕೊಳದಲ್ಲೋ ಮುಳುಗಿಸುತ್ತಾರೆ. ಒಮ್ಮೆ ರಾಣಿ ರಾಸಮಣಿಯ ಅಳಿಯ ಮಧುರನಾಥನಿಗೆ ಉತ್ಸವದ ಅನಂತರ ಪ್ರತಿಮೆಯನ್ನು ನದಿಯಲ್ಲಿ ಮುಳುಗಿಸಲು ಮನಸ್ಸಾಗಲಿಲ್ಲ, ಮೂರ್ತಿಯನ್ನು ಅದರ ಸ್ಥಳದಿಂದ ಕದಲಿಸಬಾರದೆಂದು ಆಜ್ಞಾಪಿಸಿದ. ಆಗ ಅವನ ಸಂಬಂಧಿಕರೆಲ್ಲ ಪರಮಹಂಸರ ಸಹಾಯವನ್ನು ಅರಸಿದರು. ರಾಮಕೃಷ್ಣರು ಮಥುರನಿಗೆ, ‘ತಾಯಿ ಮೂರ್ತಿಯಲ್ಲಿ ಮಾತ್ರ ಇರುವಳೇ? ನಿನ್ನ ಹೃದಯದಲ್ಲಿ ಏಕೆ ಅವಳನ್ನು ಪ್ರತಿಷ್ಠಾಪಿಸಬಾರದು? ಅದೇ ಅವಳ ಶಾಶ್ವತ ಧಾಮ. ಈ ಮಣ್ಣಿನ ಮೂರ್ತಿಯನ್ನು ವಿಸರ್ಜಿಸಿಬಿಡು, ದೇವಿಯು ಹೃದಯದಲ್ಲಿ ಸದಾ ನೆಲೆಸಿರುವಳು’ ಎಂದರು. ಮಥುರನು ಸಮಾಧಾನಗೊಂಡನು. ಎಂದಿನಂತೆ ಮೂರ್ತಿಯ ವಿಸರ್ಜನೆ ನಡೆಯಿತು. ಈ ಸಾಮಾನ್ಯ ಘಟನೆ ಮೂರ್ತಿ ಪೂಜೆಯ ಹಿಂದಿರುವ ಭಾವವನ್ನು ಪ್ರಕಾಶಪಡಿಸುತ್ತದೆ.
ಪೂಜಾ ಕೈಂಕರ್ಯವೆಂದರೆ ಮಂತ್ರ ಘೊಷಗಳೊಂದಿಗೆ ಅಬ್ಬರಿಸುವುದಲ್ಲ, ಬದಲಾಗಿ ಅರ್ಚಿಸುತ್ತಿರುವ ಆರಾಧ್ಯಮೂರ್ತಿ ನಮ್ಮ ಆಂತರ್ಯದಲ್ಲಿಯೇ ಅಡಗಿದೆ ಎಂಬ ಭಾವನೆಯಿಂದ ಪೂಜೆಯನ್ನು ಅರ್ಪಿಸಬೇಕು. ಆಗ ಮಾತ್ರ ಪೂಜಾಕಾರ್ಯಕ್ಕೆ ಅರ್ಥ ಬರುತ್ತದೆ.