ಸಾಧನೆಯೇ ಮಂತ್ರ, ಬಿಜೆಪಿ ಕಾರ್ಯತಂತ್ರ: ಶಕ್ತಿ, ಮಂಡಲ, ಜಿಲ್ಲಾಮಟ್ಟದಲ್ಲಿ ಪ್ರಚಾರಸಭೆಗಳು; ಬಿಎಸ್​ವೈ, ಬೊಮ್ಮಾಯಿ ಭಾಗಿ

BJP
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ಡಿ.10ರಂದು ನಡೆಯಲಿರುವ ಚುನಾವಣೆಯನ್ನು ಆಡಳಿತ ಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸಿ, ತಳಸ್ತರದಿಂದ ಕ್ಷೇತ್ರ ಹಂತದವರೆಗೆ ವ್ಯವಸ್ಥಿತ ಕಾರ್ಯಯೋಜನೆ ಸಿದ್ಧಪಡಿಸಿದೆ. ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಸರ್ಕಾರ, ಪಕ್ಷದ ವರ್ಚಸ್ಸುವೃದ್ಧಿಗೆ ಮೇಲ್ಮನೆಯಲ್ಲಿ ಮೇಲುಗೈ ಸಾಧಿಸುವುದು ಕಮಲ ಪಡೆಗೆ ಮುಖ್ಯವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಮನಗೆಲ್ಲುವುದಕ್ಕೆ ‘ಸಾಧನೆಯೇ ಮಂತ್ರ’ ಬಿಜೆಪಿ ಚುನಾವಣಾ ಕಾರ್ಯತಂತ್ರದ ಪ್ರಮುಖ ಕಾರ್ಯಸೂಚಿಯಾಗಿದೆ.

25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದರೂ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದು ಪಕ್ಷದ ರಣತಂತ್ರದ ಭಾಗವಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ ಮತ್ತು ಮೈಸೂರು ಜಿಲ್ಲೆಗಳ ದ್ವಿಸದಸ್ಯ ಕ್ಷೇತ್ರಗಳಲ್ಲಿ ತಲಾ ಒಂದಕ್ಕೆ ಮಾತ್ರ ಸ್ಪರ್ಧಿಸಿ, ಅನಾಯಾಸ ಗೆಲುವಿನ ಗುರಿ ಇಟ್ಟುಕೊಂಡಿದೆ.

ಗ್ರಾಪಂಗಳಿಗೆ ಹೆಚ್ಚಿನ ಫೋಕಸ್: ಜಿಲ್ಲಾ, ತಾಲೂಕು ಪಂಚಾಯಿತಿ, ಬಿಬಿಎಂಪಿ ಹಾಗೂ ಕೆಲವು ನಗರ-ಪಟ್ಟಣ ಸಂಸ್ಥೆಗಳು ಸೇರಿ ಒಟ್ಟು 6,000 ಸದಸ್ಯರ ಅವಧಿ ಮುಗಿದು, ಮತದಾನದ ಅವಕಾಶ ಕಳೆದುಕೊಂಡಿದ್ದಾರೆ. ವಿಧಾನಪರಿಷತ್​ನಲ್ಲಿ ಪಕ್ಷ ನಿಚ್ಚಳ ಬಹುಮತ ಸಾಧಿಸಬೇಕೆಂಬ ಬಿಜೆಪಿ ಪ್ರಯತ್ನ ಫಲಿಸುವುದಕ್ಕೆ ಗ್ರಾಪಂ ಸದಸ್ಯರು ಆಧಾರಸ್ತಂಭವಾಗಿದ್ದಾರೆ. ನಿರ್ಣಾಯಕ ಮತದಾರರತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿ, ಚುನಾವಣಾ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಭಾಗ, ಜಿಲ್ಲಾ, ಮಂಡಲ ಪ್ರಭಾರಿಗಳ ಸಭೆಗಳು ಪೂರ್ಣಗೊಂಡಿವೆ. ತಾಲೂಕು ಮಟ್ಟದಲ್ಲಿ ಮೊದಲ ಸುತ್ತಿನ ಪ್ರಚಾರ ಈಗಾಗಲೆ ಅಂತಿಮ ಘಟ್ಟಕ್ಕೆ ತಲುಪಿದೆ. ಬೂತ್ ಅಧ್ಯಕ್ಷರಿಂದ ಹಿಡಿದು ಸಚಿವ, ಸಂಸದ-ಶಾಸಕರಿಗೆ ಆಯಾ ಹಂತದ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಪ್ರತಿಯೊಬ್ಬ ಮತದಾರ ಮನ-ಮನೆ ಮುಟ್ಟುವ ತಂತ್ರಗಾರಿಕೆ ಹೆಣೆಯಲಾಗಿದೆ.

ಪರಿಷತ್ ಚುನಾವಣೆಗೂ ಆದ್ಯತೆ: ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸಿ, ವ್ಯಾಪಕ ಪ್ರಚಾರದ ಮೂಲಕ ಬಿಜೆಪಿ ಪರವಾಗಿ ವಾತಾವರಣ ನಿರ್ವಿುಸುವ ಭೂಮಿಕೆ ಸಿದ್ಧಪಡಿಸಲಾಗುತ್ತಿದೆ. ಪ್ರಚಾರ ಕಾರ್ಯಕ್ಕೆ ಪ್ರಮುಖರನ್ನು ತೊಡಗಿಸುವ ಮೂಲಕ ವಿಧಾನಪರಿಷತ್ ಚುನಾವಣೆಗೂ ಅಷ್ಟೇ ಆದ್ಯತೆಯ ಸಂದೇಶ ರವಾನಿಸಬೇಕೆಂದು ವರಿಷ್ಠರು ಸೂಚಿಸಿದ್ದಾರೆ.

ಪಕ್ಷದ ಶಿಸ್ತು ಕಾಪಾಡಲು ರಾಜೀನಾಮೆ ನೀಡಿದೆ

ಹೊನ್ನಾಳಿ: ಪಕ್ಷದ ಶಿಸ್ತಿಗೆ ಕಟ್ಟು ಬಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಾಲೂಕಿನ ಗೊಲ್ಲರಹಳ್ಳಿಯಲ್ಲಿ ವಿಧಾನಪರಿಷತ್ ಚುನಾವಣೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇವತ್ತು ಒಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದುಮುಂದು ನೋಡುತ್ತಾರೆ. ಅಂಥದ್ದರಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಪಕ್ಷದಲ್ಲಿನ ಶಿಸ್ತು ಕಾಪಾಡುವುದು ಅದರ ಉದ್ದೇಶ ಎಂದರು. ವರಿಷ್ಠರು ಸೂಚಿಸಿದಾಕ್ಷಣ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಮಾಡಲು ಅನುವು ಮಾಡಿಕೊಟ್ಟಿದ್ದೇನೆ. ಅವರೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಾಧನೆಯ ಮುಖ್ಯಾಂಶಗಳು

  • ಗ್ರಾಪಂಗಳಿಗೆ ವಾರ್ಷಿಕ 35ರಿಂದ 50 ಲಕ್ಷ ರೂಪಾಯಿಗಳ ಅನುದಾನ ಲಭ್ಯ
  • ಗ್ರಾಪಂ ಸದಸ್ಯರ ಮಾಸಿಕ ಸಂಭಾವನೆ 250ರಿಂದ 1,000 ರೂಪಾಯಿಗಳಿಗೆ ಏರಿಕೆ
  • ಚೆಕ್​ಗೆ ಸಹಿ ಮಾಡುವ ಅಧಿಕಾರ ಗ್ರಾಪಂ ಅಧ್ಯಕ್ಷರಿಗೆ ಪ್ರಾಪ್ತಿ
  • ‘ಜನಸ್ನೇಹಿ ಸೇವಾ ಕೇಂದ್ರ’ ಮೂಲಕ ಒಂದೇ ಸೂರಿನಡಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಸೇವಾ ಸೌಲಭ್ಯ
  • ಉದ್ಯೋಗ ಖಾತರಿ ಕೂಲಿ ದರ 275ರಿಂದ 289 ರೂಪಾಯಿಗಳಿಗೆ ಏರಿಕೆ
  • ಗ್ರಾಪಂಗಳ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ವಿುಸಲು ನರೇಗಾದಡಿ 28 ಲಕ್ಷ ರೂ. ಅನುದಾನ
  • 12 ಮತ್ತು 13ನೇ ಹಣಕಾಸು ಯೋಜನೆಯಡಿ ವಾರ್ಷಿಕ ಅನುದಾನ 3,000ದಿಂದ 9,000 ಕೋಟಿ ರೂಪಾಯಿಗಳಿಗೆ ಹೆಚ್ಚಳ
  • ನೀರು ಲಭ್ಯವಿರುವ ಗ್ರಾಮಗಳಲ್ಲಿ ‘ಮನೆ ಮನೆಗೆ ಗಂಗೆ ಯೋಜನೆ’ಯಡಿ ನಲ್ಲಿ ನೀರಿನ ಸಂಪರ್ಕ
  • ಸ್ವಚ್ಛ ಭಾರತ ಯೋಜನೆಯಡಿ ಶೌಚಗೃಹ ನಿರ್ವಣದ ಜತೆಗೆ ನೀರು ಪೂರೈಕೆಗೆ ಒತ್ತು
  • ಗ್ರಾಮ, ನಗರ-ಪಟ್ಟಣಗಳಲ್ಲಿ ಸುಧಾರಣೆ, ಮೂಲ ಸವಲತ್ತು ವೃದ್ಧಿ, ಘನತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗೆ ಆದ್ಯತೆ

ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿಯಲ್ಲಿನ ಆಮೂಲಾಗ್ರ ಸುಧಾರಣೆ ಯನ್ನು ಗಮನಿಸಿರುವ ಗ್ರಾಪಂ ಸದಸ್ಯರು ಬಿಜೆಪಿ ಬೆಂಬಲಿಸಲಿದ್ದಾರೆ.

| ಎನ್.ರವಿಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ರಣತಂತ್ರದ ಆಯಾಮ

  • ಕಾರ್ಯಯೋಜನೆ ಅನುಷ್ಠಾನದ ಮೇಲೆ ವಿಭಾಗ, ಜಿಲ್ಲಾ ಪ್ರಭಾರಿಗಳ ನಿಗಾ
  • ವಿಧಾನಪರಿಷತ್ ಕ್ಷೇತ್ರ, ಮಂಡಲಮಟ್ಟದಲ್ಲಿ ಕೋರ್ ಕಮಿಟಿ ರಚನೆ
  • ಪ್ರತಿದಿನದ ಪ್ರಗತಿ ಪರಾಮರ್ಶೆ, ಅಗತ್ಯ ಮಾರ್ಗದರ್ಶನದ ವ್ಯವಸ್ಥೆ
  • ಎದುರಾಳಿ ಬಲ-ದೌರ್ಬಲ್ಯದ ಮಾಹಿತಿ ಸಂಗ್ರಹಿಸಿ ತಂತ್ರಗಾರಿಕೆ
  • ಗ್ರಾಪಂ ಸದಸ್ಯರೊಂದಿಗೆ ಅಭ್ಯರ್ಥಿ ನೇರ ಮಾತುಕತೆಗೆ ಪ್ರಾಶಸ್ಱ
  • ಪ್ರತಿ ಮತದಾರನ ಮನೆಗೆ ಶಾಸಕರು, ಮುಖಂಡರ ಭೇಟಿ ಕಡ್ಡಾಯ
  • ಪ್ರತಿಯೊಬ್ಬ ಮತದಾರನಿಗೆ ತಲಾ ಒಬ್ಬ ಕಾರ್ಯಕರ್ತನ ಜೋಡಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net