ಶೌಚಗೃಹದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಆರೋಪಿ ಸೆರೆ

a
Published on

ಬೆಂಗಳೂರು: ಮೆಟ್ರೋ ನಿಲ್ದಾಣಗಳ ಶೌಚಗೃಹದಲ್ಲಿ ಆನ್‌ಲೈನ್ ಚಾಕೋಲೇಟ್ ಮಾರಾಟದ ಕ್ಯೂಆರ್ ಕೋಡ್ ಅಂಟಿಸಿದ್ದ ಆರೋಪದಡಿ ಅರುಣ್ ಎಂಬಾತನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೀಪಾಂಜಲಿನಗರ ಮೆಟ್ರೋ ನಿಲ್ದಾಣದ ಭದ್ರತಾ ಉಸ್ತುವಾರಿ ಚಂದ್ರಶೇಖರಯ್ಯ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.೨೩ರಂದು ಆರೋಪಿಯು ದೀಪಾಂಜಲಿನಗರದ ಪುರುಷರ ಶೌಚಗೃಹ ಗೋಡೆಗಳ ಮೇಲೆ ಇಂಪ್ರೆಸ್ ಯುವರ್ ಲವ್ಡ್ ಒನ್ಸ್ ವಿತ್ ಡಿಸೈರ್ ಸ್ಕಾೃನ್ ಮೀ-೨ ಎಂಬ ಬರಹದ ಕ್ಯೂರ್ ಕೋಡ್ ಅನ್ನು ಅಂಟಿಸಿದ್ದ. ಅದನ್ನು ಸ್ಕಾೃನ್ ಮಾಡಿದಾಗ ಇನ್‌ಸ್ಟ್ರಾಗ್ರಾಂ ಖಾತೆ ತೆರೆದು, ಅದರಲ್ಲಿ ಡಿಸೈರ್ ಕಪಲ್ ಚಾಕೋಲೇಟ್ ಎಂಬ ಸಂದೇಶವಿದ್ದು, ಅದನ್ನು ಆನ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದಾಗಿದೆ ಎಂಬ ಸಂದೇಶ ಇತ್ತು. ಅಲ್ಲದೆ, ಅದರಲ್ಲಿ ಅನೇಕ ಪೇಜ್‌ಗಳು ಒಪನ್ ಆಗುತ್ತಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಅದನ್ನು ಗಮನಿಸಿದ ಸಿಬ್ಬಂದಿ ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿ ಮೆಟ್ರೋ ಹಸಿರು ಮಾರ್ಗದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ರಾಜಾಜಿನಗರದವರೆಗೆ ಮತ್ತು ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ದೀಪಾಂಜಲಿನಗರದವರೆಗಿನ ಎಲ್ಲಾ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅಂಟಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದುಕೊಂಡು ಆರೋಪಿ ಬಿಡುಗಡೆಯಾಗಿದ್ದಾನೆ.
ಆರೋಪಿಯ ವಿಚಾರಣೆ ವೇಳೆ ತಾನು ಹೊಸ ಸ್ಟಾರ್ಟ್ ಅಪ್ ಕಂಪನಿ ತೆರೆದಿದ್ದು, ಅದನ್ನು ಪ್ರಚಾರ ಮಾಡಲು ಈ ಮಾರ್ಗ ಅನುಸರಿಸಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net