ಕೋರ್ಟ್ ಆವರಣದಲ್ಲೇ ಮಹಿಳಾ ವಕೀಲಗೆ ಇರಿದ ಆರೋಪಿ

Arrest Kaidhi
ಇಬ್ಬರು ಪೊಲೀಸರ ವಶಕ್ಕೆ.
Published on

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೊಬ್ಬ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ಮಹಿಳಾ ವಕೀಲರೊಬ್ಬರಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಈ ಸಂಬಂಧ ಶೇಷಾದ್ರಿಪುರದ ನಿವಾಸಿ ಜೆ.ವಿ.ಜಯರಾಮರೆಡ್ಡಿ (೪೫) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯ ಕೃತ್ಯದಿಂದ ಮಲ್ಲೇಶ್ವರದ ವಿಮಲಾ ಎಂಬ ವಕೀಲೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಿತಕ್ಕೊಳಗಾದ ವಿಮಲಾ ಕಾನೂನು ಪದವಿ ಪಡೆದುಕೊಂಡಿದ್ದು, ಆದರೆ ವಕೀಲಿಕೆ ಮಾಡುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಜಯರಾಮರೆಡ್ಡಿ ಪರಿಚಯವಾಗಿದ್ದು, ಇಬ್ಬರು ಆತ್ಮೀಯವಾಗಿದ್ದರು. ಈ ಮಧ್ಯೆ ಜಯರಾಮರೆಡ್ಡಿಯಿಂದ ವಿಮಲಾ ಲಕ್ಷಾಂತರ ರೂ. ಪಡೆದುಕೊಂಡಿದ್ದರು ಎನ್ನಲಾಗಿದೆ. ಆದರೆ, ನಾಲ್ಕು ವರ್ಷಗಳಿಂದ ಇಬ್ಬರ ನಡುವೆ ಹಣಕಾಸು ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಹಣಕಾಸು ಮಾತ್ರವಲ್ಲದೇ ಕೆಲ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.ಈ ಸಂಬಂಧ ವಿಮಲಾ ೨೦೨೦ರಲ್ಲಿ ಶೇಷಾದ್ರಿಪುರ ಠಾಣೆಯಲ್ಲಿ ಜಯರಾಮರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮಂಗಳವಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ೧ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಸಂಬಧ ವಿಮಾಲಾ ಕೋರ್ಟ್‌ಗೆ ಬರುತ್ತಿದ್ದು, ಕೋರ್ಟ್ ಹಾಲ್ ಸಮೀಪದಲ್ಲೇ ಆರೋಪಿ ವಿಮಾಲಾ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಆಕೆಯ ಕೈ ಹಾಗೂ ಹೊಟ್ಟೆ ಭಾಗದಲ್ಲಿ ಇರಿದಿದ್ದಾನೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯ ಎಸಗಲು ಆರೋಪಿ ಚಾಕುವನ್ನು ಜತೆಗೆ ತಂದಿದ್ದ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net