ಆರೋಪಿ ಸತೀಶ್ ಬಾಬು ವಿಚಾರಣೆ ನಡೆಸಲು ಮುಂದಾದ ಎಸ್‌ಐಟಿ

sit
Published on

ಬೆಂಗಳೂರು: ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬುನನ್ನು ೮ ದಿನಗಳ ಕಾಲ ವಶಕ್ಕೆ ಪಡೆದಿರುವ ಎಸ್‌ಐಟಿ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಎಚ್.ಡಿ.ರೇವಣ್ಣ ಸೂಚನೆ ಮೇರೆಗೆ ಸತೀಶ್ ಬಾಬು ಮಹಿಳೆಯನ್ನು ಆಕೆಯ ಮನೆಯಿಂದ ಕರೆದುಕೊಂಡು ಹೋಗಿದ್ದರು. ರೇವಣ್ಣನ ಆಪ್ತ ರಾಜಗೋಪಾಲ್ ಎಂಬುವವರ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಆ ಮಹಿಳೆಯನ್ನು ಬಚ್ಚಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಪ್ರಮುಖ ಆರೋಪಿ ಎನ್ನಲಾದ ಎಚ್.ಡಿ.ರೇವಣ್ಣನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಮತ್ತೊಬ್ಬ ಆರೋಪಿ ಸತೀಶ್ ಬಾಬುನನ್ನು ವಿಚಾರಣೆ ನಡೆಸಲಿದ್ದಾರೆ.

ಮುಖಾಮುಖಿ ವಿಚಾರಣೆ ಸಾಧ್ಯತೆ:
ಎಸ್‌ಐಟಿ ವಶದಲ್ಲಿರುವ ರೇವಣ್ಣ ವಿಚಾರಣೆ ವೇಳೆ ನನಗೂ ಆ ಮಹಿಳೆಗೂ ಯಾವುದೇ ಸಂಬಂಧವಿಲ್ಲ. ಆಕೆ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ಸತೀಶ್ ಬಾಬು, ರೇವಣ್ಣ ಅವರ ಸೂಚನೆ ಮೇರೆಗೆ ಆ ಮಹಿಳೆಯನ್ನು ಕರೆದೊಯ್ದು ತೋಟದ ಮನೆಗೆ ಬಿಟ್ಟಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಸತೀಶ್ ಬಾಬು ಮತ್ತು ರೇವಣ್ಣನನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net