ತಿಂಗಳಾದರೂ ಪತ್ತೆಯಾಗದ ಆರೋಪಿ ಜಗ್ಗ

Crime Logo
Published on

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ ಘಟನೆ ನಡೆದು ಒಂದು ತಿಂಗಳಾದರೂ ಪತ್ತೆಯಾಗಿಲ್ಲ.

ಜಗ್ಗನ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಹೊರಡಿಸಿದರೂ ಆರೋಪಿ ದೇಶದಿಂದ ಮತ್ತೊಂದು ದೇಶಕ್ಕೆ ಪರಾರಿಯಾಗುತ್ತಿದ್ದಾನೆ.

ಜುಲೈನಲ್ಲಿ ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಬಳಿಕ ವಿದೇಶಕ್ಕೆ ಹಾರಿದ ಜಗದೀಶ್ ದುಬೈನಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಮೇರೆಗೆ ಸಿಐಡಿ ಪೊಲೀಸರು, ಆತನ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಹೊರಡಿಸಿದ್ದರು. ಆದರೆ, ಆತ ದುಬೈನಿಂದ ಥೈಲ್ಯಾಂಡ್, ಬಳಿಕ ಇಂಡೋನೇಷಿಯಾ ಹೀಗೆ ಕಳೆದ ಒಂದು ತಿಂಗಳಲ್ಲಿ ನಾಲ್ಕು ದೇಶ ಸ್ಥಳಾಂತರಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಮತ್ತೊಂದು ಇಂಟರ್‌ಪೋಲ್ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿಯನ್ನು ಬಂಧಿಸಿ ಆದಷ್ಟೇ ಬೇಗ ರಾಜ್ಯಕ್ಕೆ ಕರೆತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಿಂದಲೇ ಜಗ್ಗನಿಗೆ ಹಣ ಪೂರೈಕೆ!

ಪೊಲೀಸರ ಕಣ್ಣು ತಪ್ಪಿಸಿ ವಿದೇಶದಲ್ಲಿ ಓಡಾಡುತ್ತಿರುವ ಜಗದೀಶ್‌ಗೆ ಬೆಂಗಳೂರಿನಿಂದ ಕೆಲವರು ಆತನ ಖಾತೆಗೆ ಹಣ ಜಮೆ ಮಾಡುತ್ತಿರುವುದು ಗೊತ್ತಾಗಿದೆ. ಈ ಹಣದಿಂದಲೇ ಆತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪರಾರಿಯಾಗುತ್ತಿದ್ದಾನೆ. ಆದರಿಂದ ಆತನ ಬ್ಯಾಂಕ್ ಖಾತೆ ಪರಿಶೀಲಿಸಲಾಗುತ್ತಿದೆ. ಸದ್ಯದಲ್ಲೇ ಆತನಿಗೆ ಹಣ ಜಮೆ ಮಾಡಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಆತನ ಪಾಸ್‌ಪೋರ್ಟ್ ಮತ್ತು ವೀಸಾ ಬಳಕೆಯಾಗುತ್ತಿರುವ ಖಚಿತ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net