ರೇಣುಕಸ್ವಾಮಿ ಮೈ ಮೇಲಿದ್ದ ಚಿನ್ನಾಭರಣ ದೋಚಿದ್ದ ಆರೋಪಿಗಳು

Crime Logo
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ನಂತರ ಅವರ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ಆರೋಪಿಗಳು ದೋಚಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳಾದ ದರ್ಶನ್ ಮತ್ತು ಸಹಚರರನ್ನು ಶನಿವಾರ ಕೋರ್ಟ್‌ನಲ್ಲಿ ಹಾಜರುಪಡಿಸಿದ್ದಾಗ ವಾದ ಮಂಡಿಸಿದ್ದ ಪೊಲೀಸ್ ಪರ ವಿಶೇಷ ಅಭಿಯೋಜಕರು, ಆರೋಪಿಗಳು ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟು ಕ್ರೌರ್ಯ ಮೆರೆದಿದ್ದರು ಎಂಬ ಭಯಾನಕ ಸಂಗತಿಯನ್ನು ಬಹಿರಂಗಪಡಿಸಿದ್ದರು. ಇದೀಗ ಆರೋಪಿಗಳು ಮತ್ತಷ್ಟು ಅಪರಾಧ ಕೃತ್ಯಗಳು ಎಸಗಿರುವ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ರೇಣುಕಸ್ವಾಮಿ ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತನ ಪೈಶಾಚಿಕ ಕೃತ್ಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ರಾಘವೇಂದ್ರ, ರೇಣುಕಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆಯ ಶೆಡ್‌ಗೆ ಎಳೆದೊಯ್ದು ಹಲ್ಲೆ ನಡೆಸಿದ್ದ. ಅಲ್ಲದೆ, ರೇಣುಕಸ್ವಾಮಿಯನ್ನು ಕೊಂದ ನಂತರ ಅವರ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ಆತ ದೋಚಿದ್ದ ಎಂದು ಗೊತ್ತಾಗಿದೆ.
ತೀವ್ರ ಥಳಿತಕ್ಕೊಳಗಾಗಿ ರೇಣುಕಸ್ವಾಮಿ ಕೊಲೆಯಾದ ಕೂಡಲೇ ರಾಘವೇಂದ್ರ, ಪಟ್ಟಣಗೆರೆಯ ಶೆಡ್‌ನಿಂದ ಕಾಲ್ಕಿತ್ತಿದ್ದ. ಬಳಿಕ ಇತರೆ ಆರೋಪಿಗಳು ಆತನಿಗೆ ಕರೆ ಮಾಡಿ ೧೦ ಲಕ್ಷ ರೂ. ಹಣ ಕೊಡುತ್ತೇವೆ ಎಂದು ಹೇಳಿದಾಗ ಹಣದಾಸೆಗೆ ರಾಘವೇಂದ್ರ ಶೆಡ್‌ಗೆ ಮರಳಿ ಬಂದಿದ್ದ. ರೇಣುಕಸ್ವಾಮಿಯ ಶವವನ್ನು ಎಸೆಯಲು ರಾಘವೇಂದ್ರ ಸಹ ಇತರೆ ಆರೋಪಿಗಳ ಜತೆಗೆ ಹೋಗಿದ್ದ. ಶವ ಎಸೆಯುವುದಕ್ಕೂ ಮುನ್ನ ರೇಣುಕಸ್ವಾಮಿಯ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ರಾಘವೇಂದ್ರ ದೋಚಿದ್ದ. ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿ ಕಡಗ ಮತ್ತು ಕೈಗಡಿಯಾರ ತೆಗೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿನ್ನಾಭರಣ ಜಪ್ತಿ:
ಮೃತದೇಹ ಎಸೆದ ನಂತರ ರಾಘವೇಂದ್ರ ತನ್ನ ಪತ್ನಿಗೆ ಕರೆ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿ, ಪತ್ನಿಯನ್ನು ಅಲ್ಲಿಯೇ ಇರಿಸಿದ್ದ. ರೇಣುಕಸ್ವಾಮಿಯ ಶವದ ಮೇಲಿಂದ ದೋಚಿದ್ದ ಆಭರಣಗಳನ್ನು ಆತ ಪತ್ನಿಗೆ ಕೊಟ್ಟಿದ್ದ. ಆತನ ಪತ್ನಿಯು ಆ ಆಭರಣಗಳನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದಳು. ರಾಘವೇಂದ್ರ ವಿಚಾರಣೆ ವೇಳೆ ಈ ವಿಚಾರ ತಿಳಿಸಿದ್ದು, ಈ ಸುಳಿವು ಆಧರಿಸಿ ಆತನ ಪತ್ನಿಯಿಂದ ಆಭರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೇಣುಕಸ್ವಾಮಿಯ ಅಪಹರಣದಲ್ಲಿ ರಾಘವೇಂದ್ರನದ್ದೇ ಪ್ರಮುಖ ಪಾತ್ರವಿದೆ. ರಾಘವೇಂದ್ರನೇ ಜಗ್ಗು, ಅನು ಎಂಬ ದರ್ಶನ್ ಅಭಿಮಾನಿಗಳನ್ನು ಸೇರಿಸಿಕೊಂಡು, ರೇಣುಕಾಸ್ವಾಮಿಯನ್ನು ಅಪಹರಿಸಿ ಚಿತ್ರದುರ್ಗದಿಂದ ಕಾರಿನಲ್ಲಿ ಪಟ್ಟಣಗೆರೆಯ ಶೆಡ್‌ಗೆ ಕರೆತಂದಿದ್ದ. ಅಲ್ಲದೆ, ಶೆಡ್‌ನ ಒಳಗೆ ರಾಘವೇಂದ್ರನೂ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದೆ.

ಪವಿತ್ರಾಗೌಡ ಮನೆಯಲ್ಲಿ ಮಹಜರು:
ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ನಟಿ ಪವಿತ್ರಾಗೌಡ ಮತ್ತು ಅವರ ಆಪ್ತ ಪವನ್ ಮನೆಯಲ್ಲಿ ಪೊಲೀಸರು ಭಾನುವಾರ ಮಹಜರು ನಡೆಸಿದರು. ಆರ್.ಆರ್.ನಗರದ ಮನೆಗೆ ಪವಿತ್ರಾಗೌಡ ಮತ್ತು ಪವನ್‌ನನ್ನು ಜತೆಯಲ್ಲೇ ಕರೆತಂದಿದ್ದ ಪೊಲೀಸರು ಇಂಚಿಂಚೂ ಪರಿಶೀಲಿಸಿದರು. ಕೊಲೆ ಘಟನಾ ದಿನ ಪವಿತ್ರಾ ಅವರು ಧರಿಸಿದ್ದ ಬಟ್ಟೆ ಹಾಗೂ ರೇಣುಕಸ್ವಾಮಿಗೆ ಹೊಡೆಯಲು ಅವರು ಬಳಸಿದ್ದರು ಎನ್ನಲಾದ ಚಪ್ಪಲಿಯನ್ನು ಪೊಲೀಸರು ಮಹಜರು ವೇಳೆ ಜಪ್ತಿ ಮಾಡಿದ್ದಾರೆ.
ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾಗೌಡ ನೇರವಾಗಿ ಆರ್.ಆರ್.ನಗರದ ತಮ್ಮ ಮನೆಗೆ ಹೋಗಿದ್ದರು. ಅವರೇ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದು ಮೊದಲು ಹಲ್ಲೆ ಮಾಡಿದ್ದರು. ಆ ಚಪ್ಪಲಿ ಮತ್ತು ಹಲ್ಲೆಯ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆಗಳನ್ನು ಪವಿತ್ರಾಗೌಡ ಮನೆಯಲ್ಲಿ ಬಚ್ಚಿಟ್ಟಿದ್ದರು. ಮೂರು ಅಂತಸ್ತಿನ ಪವಿತ್ರಾಗೌಡರ ಡುಪ್ಲೆಕ್ಸ್ ಮನೆಯಲ್ಲಿ ಕೆಳಗಡೆ ವಾಹನಗಳ ಪಾರ್ಕಿಂಗ್‌ಗೆ ಜಾಗ ಮತ್ತು ಆರೋಪಿ ಪವನ್‌ನ ಮನೆ ಇದೆ. ಪವನ್, ಪವಿತ್ರಾಗೌಡರ ಮನೆಯ ಕೆಲಸಗಾರನಾಗಿದ್ದ. ಮಹಜರಿಗೆ ಬಂದಿದ್ದ ವೇಳೆ ಪವಿತ್ರಾಗೌಡ ಮತ್ತು ಪವನ್ ಸ್ವಲ್ಪವೂ ಪಶ್ಚಾತಾಪವಿಲ್ಲದೆ ನಗುತ್ತಲೇ ಇದ್ದ ದೃಶ್ಯ ಕಂಡುಬಂತು.
ಮ್ಯಾನೇಜರ್ ದೇವರಾಜ್ ವಶಕ್ಕೆ:
ಪ್ರಕರಣದ ಆರನೇ ಆರೋಪಿ ಜಗದೀಶ್ ಮತ್ತು ಹತ್ತನೇ ಆರೋಪಿ ವಿನಯ್ ಮನೆಯಲ್ಲೂ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಪ್ರಕರಣದಲ್ಲಿ ಪವಿತ್ರಾಗೌಡರ ಮ್ಯಾನೇಜರ್ ದೇವರಾಜ್ ಎಂಬಾತನನ್ನು ಭಾನುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ದೇವರಾಜ್, ಕೊಲೆ ಘಟನೆಯ ದಿನ ಪವಿತ್ರಾಗೌಡರ ಜತೆ ಪಟ್ಟಣಗೆರೆಯ ಶೆಡ್‌ಗೆ ಹೋಗಿದ್ದ ಮತ್ತು ರೇಕಕಾಸ್ವಾಮಿ ಮೇಲೆ ಹಲ್ಲೆ ನಡೆಯುವಾಗ ಆತನೂ ಸ್ಥಳದಲ್ಲಿದ್ದ ಎನ್ನಲಾಗಿದೆ.

ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂ ಸಕ್ರಿಯ:
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಬಂಧನವಾಗುತ್ತಿಂತೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಸ್ಥಗಿತಗೊಳಿಸಿದ್ದ ಅವರ ಪತ್ನಿ ವಿಜಯಲಕ್ಷ್ಮಿ ಇದೀಗ ಮತ್ತೆ ಆ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ದರ್ಶನ್ ಬಂಧನವಾಗುತ್ತಿದ್ದಂತೆ ವಿಜಯಲಕ್ಷ್ಮಿ, ಆಪ್ತರು ಹಾಗೂ ಕುಟುಂಬದವರು ಅವರಿಂದ ಅಂತರ ಕಾಯ್ದುಕೊಂಡಿದ್ದರು. ದರ್ಶನ್ ತಾಯಿ ಹಾಗೂ ಸಹೋದರ ಈವರೆಗೆ ಅವರನ್ನು ಭೇಟಿ ಮಾಡಿಲ್ಲ. ವಿಜಯಲಕ್ಷ್ಮಿ ಅವರು ದರ್ಶನ್‌ರ ಬಂಧನದ ದಿನವೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಈಗ ಅವರು ಆ ಹಳೆ ಖಾತೆಯನ್ನೇ ಮತ್ತೆ ಸಕ್ರಿಯಗೊಳಿಸಿದ್ದಾರೆ. ಆದರೆ, ತಾವು ಈ ಹಿಂದೆ ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಾಲೋ ಮಾಡುತ್ತಿದ್ದವರನ್ನು ಸಹ ಅನ್‌ಾಲೋ ಮಾಡಿದ್ದಾರೆ. ಮತ್ತೆ ಸಕ್ರಿಯಗೊಳಿಸಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಳೆಯ ಹೆಸರನ್ನೇ ಮುಂದುವರಿಸಿದ್ದಾರೆ. ಖಾತೆ ಹೆಸರು ‘ವಿಜಿ ದರ್ಶನ್’ ಎಂದೇ ಇದೆ. ಆದರೆ, ಖಾತೆಯ ಪ್ರೊೈಲ್ ಚಿತ್ರ ಮತ್ತು ಹಿಂದಿನ ಪೋಸ್ಟ್‌ಗಳೆಲ್ಲವನ್ನೂ ವಿಜಯಲಕ್ಷ್ಮಿಡಿಲೀಟ್ ಮಾಡಿದ್ದಾರೆ.
ವಿಜಯಲಕ್ಷ್ಮಿಅವರೇ ಪತಿ ದರ್ಶನ್‌ರ ಜಾಮೀನಿನಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ವಕೀಲರಾದ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬುರನ್ನು ನೇಮಿಸಿದ್ದಾರೆ. ಈ ವಕೀಲರು ವಿಜಯಲಕ್ಷ್ಮಿ ಮತ್ತು ಅವರ ಪಾಲಕರ ಮೂಲಕವಾಗಿ ದರ್ಶನ್‌ರ ಪರ ಕಾನೂನು ಹೋರಾಟ ನಡೆಸಿದ್ದಾರೆ.

ಮೈಸೂರಿನಲ್ಲಿ ಸ್ಥಳ ಮಹಜರು:
ಪ್ರಕರಣದಲ್ಲಿ ಮೊದಲು ಶರಣಾಗಿದ್ದ ನಾಲ್ವರು ಆರೋಪಿಗಳು ಹಾಗೂ ದರ್ಶನ್‌ರನ್ನು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ. ರೇಣುಕಸ್ವಾಮಿಯ ಹತ್ಯೆ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ದರ್ಶನ್, ಮೈಸೂರಿಗೆ ತೆರಳಿದ್ದರು. ಮೊದಲೇ ನಿರ್ಧಾರವಾದಂತೆ ಶವ ವಿಲೇವಾರಿ ಮಾಡಿದ ಬಳಿಕ ಪೊಲೀಸರ ಮುಂದೆ ಶರಣಾಗಲು ಮೀನಾಮೇಷ ಎಣಿಸಿದ್ದ ಆರೋಪಿಗಳು, ಮೈಸೂರಿಗೆ ಹೋಗಿ ಖಾಸಗಿ ಹೋಟೆಲ್‌ನಲ್ಲಿ ದರ್ಶನ್‌ನನ್ನು ಭೇಟಿಯಾಗಿ ಚರ್ಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಸುಳಿವು ಆಧರಿಸಿ ಪೊಲೀಸರು ಮೈಸೂರಿನ ಆ ಹೋಟೆಲ್‌ನಲ್ಲಿ ಮಹಜರು ನಡೆಸಲು ನಿರ್ಧರಿಸಿದ್ದಾರೆ.

ಮಿಸ್ ಯೂ ಅಪ್ಪ ಎಂದು ಪೋಸ್ಟ್:
ದರ್ಶನ್ ಬಂಧನವಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ದರ್ಶನ್ ಪುತ್ರ ವಿನೀಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾನುವಾರ ವಿಶ್ವ ಅಪ್ಪಂದಿರ ದಿನದ ಹಿನ್ನೆಲೆಯಲ್ಲಿ ತಂದೆಗೆ ಶುಭಾಶಯ ಕೋರಿದ್ದಾರೆ. ‘ಮಿಸ್ ಯೂ ಅಪ್ಪ,’ ಎಂದು ವಿನೀಶ್ ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ. ದರ್ಶನ್ ಜತೆಗೆ ಇರುವ ಹಲವು ೆಟೊಗಳನ್ನು ಕೊಲಾಜ್ ಮಾಡಿ, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಅದರ ಮೇಲೆ, ‘ಹ್ಯಾಪಿ ಾದರ್ಸ್ ಡೇ ಅಪ್ಪ, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನೀವು ಎಂದೆಂದಿಗೂ ನನ್ನ ಹೀರೋ’ ಎಂದು ಬರೆದುಕೊಂಡಿದ್ದಾರೆ. ಇದನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ದರ್ಶನ್ ಬಂಧನದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದ ವಿನೀಶ್, ‘‘ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಅಸಭ್ಯ ಭಾಷೆಯಲ್ಲಿ ನಿಂದನೆ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು, ೧೫ ವರ್ಷದ ಹುಡುಗ ನಾನು, ನನಗೂ ಮನಸಿದೆ. ನನ್ನ ಭಾವನೆಗಳನ್ನು ಯಾರೂ ಪರಿಗಣಿಸಲಿಲ್ಲ. ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲದ ಅಗತ್ಯ ಇದೆ. ನನಗೆ ಶಾಪ ಹಾಕಿದರೆ ಏನೂ ಬದಲಾವಣೆಯೂ ಆಗುವುದಿಲ್ಲ, ಎಂದು ಬರೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net