

ಕಡೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ತಾಲೂಕು ಘಟಕದ ಅಂಗನವಾಡಿ ಕಾರ್ಯಕರ್ತೆಯರು ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿಯೊಂದಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಿಸುವುದು ಸೇರಿದಂತೆ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 3ಲಕ್ಷ ಇಡಿಗಂಟು ನೀಡುವ 6ನೇ ಗ್ಯಾರಂಟಿ ಪ್ರಕಟಿಸಿತ್ತು. ಕಾಂಗ್ರೆಸ್ ಕೂಡಲೇ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದರು.
ಎಐಟಿಯುಸಿ ತಾಲೂಕು ಘಟಕದ ಅಧ್ಯಕ್ಷೆ ಯು.ಆರ್.ಪಾರ್ವತಮ್ಮ ಮಾತನಾಡಿ, ಅಂಗನವಾಡಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಆದರೆ ಇತ್ತೀಚೆಗೆ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಪಂಚಾಯತ್ ರಾಜ್ ಇಲಾಖೆ ನರೇಗಾ ಯೋಜನೆಯಡಿ ಶಿಶುಪಾಲನಾ ಕೇಂದ್ರಗಳನ್ನು ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಾಲಾ ಪೂರ್ವ ತರಗತಿಗಳನ್ನು ಆರಂಭಿಸಲು ಭರದ ಸಿದ್ದತೆ ನಡೆಸಿವೆ. ಇದರಿಂದ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಅಂಗನವಾಡಿಗಳಿಗೆ ಪರ್ಯಾಯವಾಗಿ ಎಂಬಂತೆ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಅವಶ್ಯಕತೆಯಿಲ್ಲ. ಇದರಿಂದ ಸರಕಾರದ ಹಣ ವ್ಯರ್ಥವಾಗುತ್ತದೆ. ಆದುದರಿಂದ ಸರ್ಕಾರ ಈ ಅವೈಜ್ಞಾನಿಕ ನಿರ್ಧಾರದಿಂದ ಹಿಂದೆ ಸರಿಯಬೇಕು.ನಮ್ಮ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದರು.
ಶಿರಸ್ತದಾರ್ ಎಸ್.ನಾಗರತ್ನ ಹಾಗೂ ಸಿಡಿಪಿಒ ಶಿವಪ್ರಕಾಶ್‌ಗೆ ಮನವಿ ಸಲ್ಲಿಸಿದರು. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಅವರಗೆರೆ ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಗುಣಶೇಖರ್, ತಾಲೂಕು ಉಪಾಧ್ಯಕ್ಷೆ ಗೌರಮ್ಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಭಾಗ್ಯಾ, ಶಾಯಿನಾ, ಜಿ.ಟಿ.ಶಾಂತಮ್ಮ, ಹೇಮಾ, ಕಾಂತಾಮಣಿ, ಸುನಂದಾ, ಗಿರಿಜಮ್ಮ, ಉಷಾ, ಶಾಂತಾ, ಗಿರಿಜಮ್ಮ, ಶಿವಮ್ಮ ಮತ್ತಿತರಿದ್ದರು.