

| ದೇವರಾಜ್ ಕನಕಪುರ ಬೆಂಗಳೂರು
ಕರೊನಾ ಕಾರಣಕ್ಕೆ ಪಿಯು ಪರೀಕ್ಷೆ ರದ್ದಾಗಿ 550 ಅಂಕಗಳಿಂದ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳು, ಸರ್ಕಾರ ಕೊಟ್ಟ ಅಂಕ ತಿರಸ್ಕರಿಸಿ, ಈಗ ಅನುತ್ತೀರ್ಣಗೊಂಡು ಪಿಯು ಇಲಾಖೆ ಎದುರು ಕಣ್ಣೀರಿಡುತ್ತಿದ್ದಾರೆ. ಪರೀಕ್ಷೆ ಬರೆದು ಪಾಸ್ ಆಗುತ್ತೇನೆಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಲಕ್ಷಾಂತರ ಶುಲ್ಕ ಪಾವತಿಸಿ ಪ್ರವೇಶ ಪಡೆದ್ದಿದ್ದ ವಿದ್ಯಾರ್ಥಿಗಳೀಗ ಫೇಲ್ ಆಗಿದ್ದು, ಹಳೇ ಅಂಕಗಳನ್ನೇ ನೀಡುವಂತೆ ಪಾಲಕರ ಜತೆಗೆ ಇಲಾಖೆ ಅಧಿಕಾರಿಗಳ ಗೋಳಾಡುತ್ತಿದ್ದಾರೆ.
2021ರಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 6,66,497 ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಸಮೀಕರಿಸಿ ಹೊಸದಾಗಿ ಅಂಕ ನೀಡಿ ಪಾಸ್ ಮಾಡಲಾಗಿತ್ತು. ಶಿಕ್ಷಣ ಇಲಾಖೆ ನೀಡಿದ್ದ ಅಂಕಗಳನ್ನು ತೊರೆದು ಪರೀಕ್ಷೆ ಬರೆದ 943 ಪಿಯು ವಿದ್ಯಾರ್ಥಿಗಳ ಪೈಕಿ 204 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಈ ಪೈಕಿ 19 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ, 85 ವಿದ್ಯಾರ್ಥಿಗಳು 400ರಿಂದ 500 ಅಂಕ ಪಡೆದಿದ್ದರು. ವಿಜಯವಾಣಿ ಫೇಲ್ ಆದ 204 ವಿದ್ಯಾರ್ಥಿಗಳ ಅಂಕಪಟ್ಟಿ ಪಡೆದು ಫಲಿತಾಂಶ ವಿಶ್ಲೇಷಣೆ ಮಾಡಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದವರು ಈ ಬಾರಿ 488 ಅಂಕ ಪಡೆದರೂ ಫೇಲ್ ಆಗಿದ್ದಾರೆ. ಏಕೆಂದರೆ ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕ 35 ಗಳಿಸುವುದಕ್ಕೂ ಸಾಧ್ಯವಾಗಿಲ್ಲ. ಇನ್ನೂ ಪರೀಕ್ಷೆ ತೆಗೆದುಕೊಂಡಿದ್ದರೂ 18 ವಿದ್ಯಾರ್ಥಿಗಳು ಕೊನೇ ಕ್ಷಣದಲ್ಲಿ ಪರೀಕ್ಷೆಗೆ ಗೈರಾಗಿ ಫೇಲ್ ಆಗಿದ್ದಾರೆ. 600 ಅಂಕಗಳಿಗೆ 555 ಅಂಕ ಪಡೆದಿದ್ದ ವಿದ್ಯಾರ್ಥಿ ಮತ್ತಷ್ಟು ಅಂಕದ ಆಸೆಗೆ ಬಿದ್ದು ಸಿಕ್ಕ ಫೇಲ್ ಆಗಿದ್ದಾರೆ.
120 ವಿದ್ಯಾರ್ಥಿಗಳು ಸೇಫ್: ಪದವಿ ಪೂರ್ವ ಶಿಕ್ಷಣ ಇಲಾಖೆಯು ಕೊಟ್ಟಿರುವ ಅಂಕಗಳನ್ನು ತಿರಸ್ಕರಿಸುವ ಮುನ್ನವೇ ಹಲವು ಬಾರಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಒಮ್ಮೆ ಪರೀಕ್ಷೆ ತೆಗೆದುಕೊಂಡ ಮೇಲೆ ಹಳೇ ಅಂಕಗಳನ್ನು ಮರಳಿ ಪಡೆಯುವ ಅಥವಾ ಪರೀಕ್ಷೆಗೆ ಹಾಜರಾಗುವ ಎರಡಲ್ಲಿ ಒಂದು ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಂದಲೇ ಮುಚ್ಚಳಿಗೆ ಪತ್ರ ಬರೆದು ಆನಂತರ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಈ ರೀತಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ 943 ವಿದ್ಯಾರ್ಥಿಗಳ ಪೈಕಿ 120 ವಿದ್ಯಾರ್ಥಿಗಳು ಕೊನೇ ಕ್ಷಣದಲ್ಲಿ ಹಳೇ ಅಂಕಗಳಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇದರಿಂದ ಈ ವಿದ್ಯಾರ್ಥಿಗಳು ಬಚಾವ್ ಆಗಿದ್ದಾರೆ.
ನಿಲ್ಲದ ಗೋಳು: ವಿದ್ಯಾರ್ಥಿ ಓರ್ವ 500ಕ್ಕೂ ಹೆಚ್ಚಿನ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದು, ಆಗಸ್ಟ್ನಲ್ಲಿ ನಡೆದ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾನೆ. ಪಾಸ್ ಆಗಿದ್ದ ವೇಳೆಯಲ್ಲಿ ಐಐಎಂನಲ್ಲಿ ಲಕ್ಷಾಂತರ ಶುಲ್ಕ ಪಾವತಿಸಿ ಪ್ರವೇಶ ಪಡೆದಿದ್ದಾನೆ. ಫೇಲ್ ಫಲಿತಾಂಶ ನೋಡಿದ ತಕ್ಷಣ ವಿದ್ಯಾರ್ಥಿ- ಪಾಲಕರು ನೇರವಾಗಿ ಪಿಯು ಇಲಾಖೆಗೆ ಬಂದು ಮರಳಿ ಹಳೇ ಅಂಕಗಳನ್ನೇ ನೀಡುವಂತೆ ಬೇಡಿಕೊಂಡಿದ್ದಾರೆ. ಪರಿಸ್ಥಿತಿ ಅರ್ಥವಾದರೂ ಕಾನೂನಿನ ಪ್ರಕಾರ ಹಳೇ ಅಂಕ ಮರಳಿ ನೀಡುವುದಕ್ಕೆ ಸಾಧ್ಯವಿಲ್ಲವೆಂದು ಎಷ್ಟೇ ಮನವರಿಕೆ ಮಾಡಿದರೂ, ಪಾಲಕರು ಗೋಳಾಟ ನಿಲ್ಲಿಸಿಲ್ಲ. ಹಲವರು ಪಿಯು ಇಲಾಖೆಗೆ ಹೋಗಿ ಮನವಿ ಸಲ್ಲಿಸುವುದಕ್ಕೆ ಆರಂಭಿಸಿದ್ದಾರೆ.
ಫೇಲ್ ಆದ ವಿದ್ಯಾರ್ಥಿಗಳ ಪರಿಸ್ಥಿತಿ ಅರ್ಥವಾಗುತ್ತದೆ. ಅಂಕ ತಿರಸ್ಕರಿಸುವ ಮೊದಲೇ ಸೂಚನೆಗಳನ್ನು ಓದಬೇಕಿತ್ತು. ಇದೀಗ ಪರೀಕ್ಷೆ ತೆಗೆದುಕೊಂಡು ಫೇಲ್ ಆದ ಮೇಲೆ ಪಾಸ್ ಮಾಡಿ ಎಂದರೆ, ಅದು ನಮ್ಮ ಕೈಯಲ್ಲಿ ಇಲ್ಲ.
| ಆರ್.ಸ್ನೇಹಲ್ ನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ