

| ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಶ್ರೀಕ್ಷೇತ್ರ ಆನಂದವನ ಅಗಡಿ
ಗೋದಾವರಿ ನದಿ ತೀರದ ಬಾಬಳಗಾಂವ್ ಗ್ರಾಮದ ರಜಪೂತ ವಂಶದ, ವಿಠ್ಠಲನ ಅನನ್ಯ ಭಕ್ತರಾದ ಹರಿಸಿಂಗ್-ಲಕ್ಷ್ಮೀಬಾಯಿ ಆದರ್ಶ ದಂಪತಿಯ ಮಗನಾಗಿ ಜನಿಸಿದ ರಾಜಾರಾಮ ಬಾಲ್ಯದಲ್ಲಿಯೇ ವಿಠ್ಠಲನ ಅನನ್ಯ ಉಪಾಸಕ. ಸಂತ ತುಕಾರಾಮ, ನಾಮದೇವರ ಅಭಂಗಗಳನ್ನು ಸುಶ್ರಾವ್ಯವಾಗಿ ಭಕ್ತಿಯಿಂದ ಹಾಡುತ್ತ ಬೆಳೆದ. ಎಂಟು ವರ್ಷದ ಪ್ರಾಯದವನಿದ್ದಾಗ, ‘ಕೇವಲ 5 ವರ್ಷದ ಧ್ರುವನಿಗೆ ಕಂಡ ಭಗವಂತ ನನಗೇಕೆ ಕಾಣನು?’ ಎಂದು ಹಟ ತೆಗೆದ. ದ್ವಾರಕಾದಾಸರೆಂಬ ಶ್ರೇಷ್ಠ ಗುರುಗಳು ಇವನ ಭಗವದ್ದರ್ಶನದ ತೀವ್ರತೆ ಕಂಡು ಬೆರಗಾದರು. ಮುಂದೆ ಯಾವುದೇ ಮಹಾತ್ಮರು ಕಂಡಾಗ ಈತ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ ಎಂದರೆ, ‘ನೀವು ಭಗವಂತನನ್ನು ಕಂಡಿದ್ದೀರಾ?’ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ರಾಜಾರಾಮನಿಗೆ ಕುಟುಂಬ ನಿರ್ವಹಣೆ ಹೆಗಲೇರಿತು. ಆಧ್ಯಾತ್ಮಿಕ ಸಾಧನೆಯಲ್ಲಿ, ಭಗವಂತನ ನಿತ್ಯ ಅನುಸಂಧಾನ ಮಾಡುತ್ತ ಪೇಶ್ವೇ ಸೈನ್ಯದ ಮುಖಂಡನಾದನು. ತಾಯಿಯ ಇಚ್ಛೆಯಂತೆ 16ನೇ ವಯಸ್ಸಿನಲ್ಲಿ ರಾಧಾ ಎನ್ನುವಳೊಂದಿಗೆ ವಿವಾಹವಾಯಿತು. ದೇಹ ಪ್ರಪಂಚದಲ್ಲಿದ್ದರೂ ಮನವು ಭಗವಂತನನ್ನು ಕಾಣುವ ತೀವ್ರ ಹಂಬಲದ ಪಾರಮಾರ್ಥಿಕತೆಯಲ್ಲಿತ್ತು.
ಸಾಕ್ಷಾತ್ ಶಿವ ಅವತಾರಿಗಳಾದ ಚಿದಂಬರ ಮಹಾಸ್ವಾಮಿಗಳು ಕೆಂಗೇರಿ ಮುರಗೋಡದಲ್ಲಿ ಅವತರಿಸಿ, ಅನೇಕ ಬಾಲಲೀಲೆಗಳನ್ನು ತೋರಿದರು. ಅವರು ಕುಂದಗೋಳದಲ್ಲಿ ವಾಸವಾಗಿದ್ದ ಸಮಯದಲ್ಲಿ ಕೃಷ್ಣ ಭಟ್ಟರೆಂಬುವರು ಸ್ವಾಮಿಯ ಅನುಮತಿ ಪಡೆದು ಕಾಶಿಯಾತ್ರೆಗೆ ಹೊರಟರು. ತಾಯಿಯನ್ನು ಕಳೆದುಕೊಂಡ ರಾಜಾರಾಮ ಕ್ರಿಯಾಕರ್ಮಕ್ಕೆ ಬ್ರಾಹ್ಮಣರನ್ನು ಹುಡುಕುತ್ತಿದ್ದಾಗ ಗೋದಾವರಿ ನದಿಯಲ್ಲಿ ಕೃಷ್ಣ ಭಟ್ಟರ ಭೇಟಿಯಾಯಿತು. ತಾಯಿಯ ಕ್ರಿಯಾಕರ್ಮ ಮುಗಿದಮೇಲೆ ಕೃಷ್ಣ ಭಟ್ಟರಿಗೂ, ‘ನೀವು ದೇವರನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸಿದ. ಆಗ ಅವರು, ‘ಹೌದು, ಕಂಡಿದ್ದೇನೆ, ನೋಡಿದ್ದೇನೆ, ಮಾತನಾಡಿಸಿದ್ದೇನೆ’ ಎಂದಾಗ ರಾಜಾರಾಮನ ಆನಂದಕ್ಕೆ ಪಾರವೇ ಇಲ್ಲ. ಕೃಷ್ಣ ಭಟ್ಟರಿಂದ ಚಿದಂಬರ ಅವತಾರದ ಹಿನ್ನೆಲೆ, ಶೇಷ್ಠತೆ, ಬಾಲಲೀಲೆಗಳನ್ನು ಕೇಳಿ ಈತನ ಮನ ಆ ಪೂರ್ಣಬ್ರಹ್ಮನ ದರ್ಶನ ಯಾವಾಗ ಪಡದೇನೋ ಎಂದು ಹಂಬಲಿಸತೊಡಗಿತು. ಬಾಬಳಗಾಂವದ ಬಾಬಳೇಶ್ವರ ಮಂದಿರಕ್ಕೆ ನಿತ್ಯಪೂಜೆಗೆ ತೆರಳಿದಾಗ ಬಾಲರೂಪದಲ್ಲಿ ಸ್ವಾಮಿಯ ದರ್ಶನವಾಯಿತು. ಆಷಾಢ ಮಾಸದಲ್ಲಿ ರಾಜಾರಾಮ ಹೆಂಡತಿ ರಾಧಾಬಾಯಿ, ಗೆಳೆಯ ನಿಂಬಾಜಿಯೊಂದಿಗೆ, ‘ಭಗವಂತ ನಿನ್ನನ್ನು ಕಾಣಲು ಬರುತ್ತಿದ್ದೇನೆ’ ಎಂದು ಪ್ರಾರ್ಥಿಸಿ ಕುಂದಗೋಳದ ಕಡೆ ಹೊರಟ.
ಆಷಾಢ ಮಾಸದ ಜಿಟಿಜಿಟಿ ಮಳೆಯಲ್ಲಿ ದಟ್ಟವಾದ ಕಾಡಿನಲ್ಲಿ ದಾರಿ ತಪ್ಪಿದಾಗ ಚಿದಂಬರರೇ ಬಾಲ ರೂಪದಲ್ಲಿ ಬಂದು ತೋರಿದ ಲೀಲೆಯಿಂದ ರಾಜಾರಾಮನಿಗೆ ಭಗವಂತನ ಅಂತಃಕರಣದ ಪರಿಚಯವಾಯಿತು. ರಾಜಾರಾಮ ಪಂಢರಪುರಕ್ಕೆ ಬಂದು ಧ್ಯಾನಾಸಕ್ತನಾದಾಗ ಚಿದಂಬರರು ಮೊದಲ ಸಗುಣಾವತಾರದ ದರ್ಶನ ನೀಡಿದರು. ಧರ್ಮರಾಜ ಬಡವೆ ಎಂಬುವವರ ಯೋಜನೆಯಂತೆ ರಾಜಾರಾಮ, ರಾಧಾಬಾಯಿ, ನಿಂಬಾಜಿಯರು ಶ್ರಾವಣವದ್ಯ ಚತುರ್ದಶಿಯಂದು ಕುಂದಗೋಳಕ್ಕೆ ಆಗಮಿಸಿ ಭಕ್ತಸಾಗರವನ್ನು ಕಂಡು ನಿಬ್ಬೆರಗಾದರು. ಯಾವಾಗ ಭಗವಂತನನ್ನು ಕಂಡೇನೋ ಎಂಬ ತಳಮಳ ರಾಜಾರಾಮನಲ್ಲಿದ್ದರೆ, ಜನ್ಮ ಜನ್ಮಾಂತರದ ಪರಮಭಕ್ತನನ್ನು ಕಾಣುವ ತಳಮಳ ಚಿದಂಬರ ಸ್ವಾಮಿಯಲ್ಲಿಯೂ ಇತ್ತು. ‘ಭಗವಂತನನ್ನು ಕಾಣದ ಹೊರತು ಅನ್ನ ಆಹಾರ ಪಡೆಯುವುದಿಲ್ಲ’ ಎಂಬ ಶಪಥ ಮಾಡಿದ ರಾಜಾರಾಮನಿಗೆ ಐದು ದಿನಗಳ ನಂತರ ಚಿದಂಬರ ಸ್ವಾಮಿಗಳು ಕನಸಿನಲ್ಲಿ ಬಂದು, ರಾಜಾರಾಮನನ್ನು ತೊಡೆಯಮೇಲೆ ಮಲಗಿಸಿಕೊಂಡು ಬಾಯಲ್ಲಿ ಹಸಿಕೊಬ್ಬರೆ, ಸಕ್ಕರೆ ಹಾಕಿ ಕಿವಿಯಲ್ಲಿ ಶಿವಚಿದಂಬರ ನಾಮೋಪದೇಶವನ್ನು ನೀಡಿದರು. ಎಚ್ಚರವಾದ ರಾಜಾರಾಮನಿಗೆ ಕನಸಿನಲ್ಲಿ ಹಾಕಿದ ಕೊಬ್ಬರಿ, ಸಕ್ಕರೆ ನಿಜವಾಗಿಯೂ ಬಾಯಲ್ಲಿ ಹಾಗೆಯೇ ಇತ್ತು.
ಅಂದು ಮಂಗಲ ಸ್ನಾನ ಮಾಡಿದ ಮೂವರು ಗುಲಾಲ್, ಪುಷ್ಪಗಳು, ಸುಗಂಧದ್ರವ್ಯಗಳೊಂದಿಗೆ ಸ್ವಾಮಿಯ ದರ್ಶನಕ್ಕಾಗಿ ಸ್ವಾಮಿಯು ವಾಸವಾದ ವಾಡೆಯ ಹೊರಗಡೆ ನಿಂತುಕೊಂಡರು. ಬಹಳ ಉತ್ಸುಕತೆಯಿಂದ ವಾಡೆಯ ಹೊರಗಡೆ ಬಂದ ಚಿದಂಬರ ಮಹಾಸ್ವಾಮಿ ಜನರ ಮಧ್ಯದಲ್ಲಿ ರಾಜಾರಾಮನನ್ನು ಹುಡುಕತೊಡಗಿದರು, ದೂರದಿಂದ ಸ್ವಾಮಿಯನ್ನು ಕಂಡ ರಾಜಾರಾಮ ಮಂತ್ರಮುಗ್ಧಗೊಂಡ. ಪರಸ್ಪರರು ಒಬ್ಬರಿಗೊಬ್ಬರು ಕಣ್ತುಂಬ ನೋಡಿಕೊಂಡು ಆನಂದಿತರಾದರು. 2-3 ದಿನಗಳ ನಂತರ ಮತ್ತೊಮ್ಮೆ ಚಿದಂಬರ ಸ್ವಾಮಿಯನ್ನು ಭೇಟಿಯಾದ ರಾಜಾರಾಮ ಅವರ ಚರಣಗಳನ್ನು ಹಿಡಿದು ಆನಂದಸಾಗರದಲ್ಲಿ ಮುಳುಗಿದ. ಮತ್ತೇ 3-4 ದಿನಗಳ ನಂತರ ಸ್ವಾಮಿಯೇ ಸ್ವತಃ ರಾಜಾರಾಮನನ್ನು ಕೈ ಹಿಡಿದು ಏಕಾಂತ ಕೋಣೆಗೆ ಕರೆದೊಯ್ದು ರಾಜಾರಾಮನಿಗೆ ಅರ್ಜುನನಿಗೆ ಕೃಷ್ಣನು ತೋರಿದ ವಿರಾಟರೂಪ ದರ್ಶನವನ್ನು ತೋರಿಸಿದರು. ನಂತರ ರಾಜಾರಾಮನ ತಲೆಯಮೇಲೆ ಕೈಯಿಟ್ಟರು. ಹಿಂದೆ ತಾನು ಭಗವಂತನ ಪ್ರತಿ ಅವತಾರದಲ್ಲೂ ದಾಸ್ಯ ಭಕ್ತನಾಗಿದ್ದು ಆಗ ನೆನಪಾಯಿತು (ನರಸಿಂಹ ಅವತಾರದಲ್ಲಿ ಪ್ರಲ್ಹಾದ, ರಾಮಾವತಾರದಲ್ಲಿ ಅಂಗದ, ಕೃಷ್ಣಾವತಾರದಲ್ಲಿ ಉದ್ಧವ, ವಿಠ್ಠಲವತಾರದಲ್ಲಿ ನಾಮದೇವ, ತುಕಾರಾಮನಾಗಿ ಶ್ರೀ ಚಿದಂಬರ ಅವತಾರದಲ್ಲಿ ರಾಜಾರಾಮರಾಗಿ).
ಮುಂದೆ ರಾಜಾರಾಮನು ಜೀವನದುದ್ದಕ್ಕೂ ಚಿದಂಬರ ನಾಮಪ್ರಸಾರದಲ್ಲಿ ದೇಶಸಂಚಾರ ಮಾಡಿದ. 1,51,491 ಅಭಂಗಗಳನ್ನು ರಚಿಸಿ ನಿಜಾತ್ಮಬೋಧಗಳಂತಹ ಅಮೂಲ್ಯ ಗ್ರಂಥಗಳನ್ನು ರಚಿಸಿ, ಭಕ್ತಿಪಂಥವನ್ನು ಮತ್ತಷ್ಟು ಶ್ರೇಷ್ಠಗೊಳಿಸಿದ.