

ಭೋಪಾಲ್: ಮಧ್ಯಪ್ರದೇಶ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಆರೋಪಿಯ ತಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗನಿಗೆ ಗಂಭೀರವಾದ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ಬಂಧಿತ ಆರೋಪಿಯನ್ನು ಭರತ್ ಸೋನಿ ಎಂದು ಗುರುತಿಸಲಾಗಿದೆ. ಈತನ ತಂದೆಯ ಹೆಸರು ರಾಜು ಸೋನಿ. ಇಂಡಿಯಾ ಟುಡೆ ಜತೆ ಮಾತನಾಡಿರುವ ರಾಜು ಸೋನಿ, ಇಂತಹ ಹೀನ ಕೃತ್ಯ ಮಾಡಿರುವ ನನ್ನ ಮಗನಿಗೆ ಘೋರ ಶಿಕ್ಷೆ ನೀಡಿ. ಸಂತ್ರಸ್ತೆ ಸ್ಥಾನದಲ್ಲಿ ನನ್ನ ಮಗಳಿದ್ದರೂ ನಾನು ಇದನ್ನೇ ಹೇಳುತ್ತಿದ್ದೆ. ಇಂತಹ ಅಪರಾಧ ಮಾಡಿದವರು ಬದಕಲು ಅರ್ಹರಲ್ಲ. ನನ್ನ ಮಗನೇ ಆಗಿರಲಿ ಅಥವಾ ಯಾರೇ ಆಗಿರಲಿ ಅವರನ್ನು ನೇಣಿಗೆ ಹಾಕಬೇಕು ಎಂದು ಹೇಳಿದರು.
ನನ್ನ ಮಗನನ್ನು ನಿನ್ನೆ ಬಂಧಿಸಲಾಯಿತು ಮತ್ತು ಹೀನ ಘಟನೆಯನ್ನು ನಾನು ಮಾಧ್ಯಮದ ಮೂಲಕ ತಿಳಿದುಕೊಂಡೆ. ಈ ಬಗ್ಗೆ ಮಗನೊಂದಿಗೂ ಸಹ ಮಾತನಾಡಿದ್ದೆ. ಆದರೆ, ಆತ ಸ್ವಲ್ಪವೂ ವಿಚಲಿತನಾಗಲಿಲ್ಲ. ಏನೂ ನಡೆದೇ ಇಲ್ಲ ಅನ್ನುವಂತೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡು. ಈ ಘಟನೆ ಎಲ್ಲಿ ನಡೆದಿದೆ ಎಂದು ಆತನೇ ನನ್ನನ್ನು ಕೇಳಿದೆ. ನಾನು ಉಜ್ಜಯಿನಿಯಲ್ಲಿ ಎಂದು ಹೇಳಿದೆ ಎಂದು ರಾಜು ಸೋನಿ ತಿಳಿಸಿದ್ದಾರೆ.
ಪೊಲೀಸರು ಮಗನನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಆದರೆ, ಸತ್ಯವು ನಂತರ ಹೊರಬರುತ್ತದೆ. ಅವನು ನನ್ನ ಮಗು ಮತ್ತು ನಾನು ಅವನನ್ನು ಬೆಂಬಲಿಸುತ್ತೇನೆ. ಆದರೆ ಇನ್ನೊಬ್ಬರ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ನನ್ನ ಮಗ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳಬಲ್ಲೆ. ಆದರೆ, ಅವನು ಮಾಡಿದ್ದರೆ ಕಠಿಣ ಶಿಕ್ಷೆಯನ್ನು ನೀಡಬೇಕು. ಸಂಭಾವ್ಯ ಅಪರಾಧಿಗಳನ್ನು ತಡೆಯಲು ಇಂತಹ ಭಯಾನಕ ಪ್ರಕರಣಗಳಲ್ಲಿ ತ್ವರಿತ ಕ್ರಮದ ಅಗತ್ಯವಿದೆ ಎಂದು ರಾಜು ಸೋನಿ ಹೇಳಿದರು.
ಮಧ್ಯಪ್ರದೇಶದ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭರತ್ ಸೋನಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿ ಅರೆಬೆತ್ತಲೆಯಾಗಿ ರಕ್ತಸ್ರಾವದಿಂದ ಬಳಲುತ್ತಾ ಸುಮಾರು 8 ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡು ಸಹಾಯಕ್ಕಾಗಿ ಮನವಿ ಮಾಡಿದ್ದಳು. ಆದರೆ, ಯಾರೊಬ್ಬರು ಸಹಾಯಕ್ಕಾಗಿ ಧಾವಿಸಲಿಲ್ಲ. ಕೊನೆಗೆ ಆಕೆಯೇ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಳು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಟೋ ಚಾಲಕ ಭರತ್ ಸೋನಿಯನ್ನು ಬಂಧಿಸಿ ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದ ನಂತರ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಆತ ಯತ್ನಿಸಿದ್ದ. ಆದರೆ, ಪೊಲೀಸರಿಗೆ ಮತ್ತೆ ಸಿಕ್ಕಿಬಿದ್ದಿದ್ದಾನೆ. (ಏಜೆನ್ಸೀಸ್)