

ರಾಯಚೂರು: ನಿವೃತ್ತಿ ನಂತರ ಬಂದ ಹಣದಲ್ಲಿ ಆರಾಮವಾಗಿ ಬದುಕು ಸಾಗಿಸಬೇಕು ಎನ್ನುವ ಮನೋಭಾವ ಹೊಂದಿರುವ ಜನರ ಮಧ್ಯೆ ನಿವೃತ್ತಿಯ ನಂತರ ತಮ್ಮ ಬದುಕನ್ನು ಬಡ ವಿದ್ಯಾರ್ಥಿಗಳ ಬದುಕಿನ ಏಳಿಗೆಗಾಗಿ ಮೀಸಲಿಟ್ಟಿರುವ ಈರಪ್ಪ ಸುಗೂರು ಪ್ರತ್ಯೇಕವಾಗಿ ಕಾಣುತ್ತಾರೆ. ಶಾಲಾ, ಕಾಲೇಜು ಓದುವ ಗ್ರಾಮಾಂತರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ದೂರ ಪ್ರತಿನಿತ್ಯ ಹೋಗುವುದನ್ನು ಕಂಡು ಸಿಂಧನೂರು ತಾಲೂಕು ಅಂಬಾಮಠದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ವಸತಿ ನಿಲಯವನ್ನು ಸ್ಥಾಪಿಸುವ ಮೂಲಕ 200 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕಿಗೆ 76 ವರ್ಷದ ಇಳಿ ವಯಸ್ಸಿನಲ್ಲಿಯೂ ಈರಪ್ಪ ಸುಗೂರು ಆಸರೆಯಾಗಿದ್ದಾರೆ.
ಅಂಬಾಮಠದ ಹತ್ತಿರ ಜಾಗ ಖರೀದಿ ಮಾಡಿ ನಿವೃತ್ತಿ ನಂತರ ಬಂದ 20 ಲಕ್ಷ ರೂ.ನ್ನು ತೊಡಗಿಸಿ 2004ರಲ್ಲಿ ಆರಂಭವಾದ ವಸತಿ ನಿಲಯ 50 ಬಾಲಕಿಯರಿಂದ ಆರಂಭವಾಗಿದ್ದು, ಪ್ರಸ್ತುತ 170 ಬಾಲಕಿಯರು ಹಾಗೂ 30 ಬಾಲಕರಿಗೆ ಆಶ್ರಯ ಕಲ್ಪಿಸಿದೆ. ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ಅಂಬಾಮಠದಲ್ಲಿರುವ ಶಾಲೆ, ಕಾಲೇಜುಗಳಲ್ಲಿ ಓದುವ ಸುತ್ತಮುತ್ತಲ ಸಿಂಗಾಪುರ, ಮುಕುಂದ, ಸೋಮಲಾಪುರ, ರೌಡಕುಂದಾ, ಗೊರೆಬಾಳ, ಸಾಲಗುಂದಾ ಸೇರಿ ಹಲವು ಗ್ರಾಮಗಳ ಮಕ್ಕಳು ವಸತಿ ನಿಲಯದಲ್ಲಿದ್ದು ಅಭ್ಯಾಸ ಮಾಡುತ್ತಿದ್ದಾರೆ. ಈರಪ್ಪ ಸುಗೂರು ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಶ್ರೀ ಅಂಬಾದೇವಿ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ 1 ರಿಂದ 7ನೇ ತರಗತಿವರೆಗೆ ಶಾಲೆಯನ್ನು ಆರಂಭಿಸಿದ್ದಾರೆ.
ಈರಪ್ಪರ ಸೇವಾ ಕಾರ್ಯವನ್ನು ಕಂಡು ಕಟ್ಟಡ ನಿರ್ವಣಕ್ಕಾಗಿ ಹಿಂದೆ ಕೊಪ್ಪಳ ಸಂಸದರಾಗಿದ್ದ ಎಚ್.ಜಿ.ರಾಮುಲು, ಶಿವರಾಮೇಗೌಡ ಹಾಗೂ ಮಾಜಿ ಶಾಸಕ ಹಂಪನಗೌಡ ಬಾರ್ದಲಿ ತಲಾ ಐದು ಲಕ್ಷ ರೂ.ಗಳನ್ನು ನೀಡಿದ್ದಾರೆ. ಜತೆಗೆ ಸರ್ಕಾರ 2006-07ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಮಾಸಿಕ ತಲಾ ಒಂದು ಸಾವಿರ ರೂ.ನಂತೆ ನೀಡಲು ಆರಂಭಿಸಿದೆ.
ಈರಪ್ಪ ಸುಗೂರು ಆರಂಭದಲ್ಲಿ ವಸತಿ ನಿಲಯ ಆರಂಭಿಸಿದಾಗ ಸುತ್ತಮುತ್ತಲ ಗ್ರಾಮಸ್ಥರು ವ್ಯವಹಾರಿಕ ದೃಷ್ಟಿಯಿಂದ ವಸತಿ ನಿಲಯ ಆರಂಭಿಸಿರಬುದು ಎಂದು ಭಾವಿಸಿದ್ದರು. ಆದರೆ ಆರ್ಥಿಕ ಸಂಕಷ್ಟದ ನಡುವೆಯೂ ಈರಪ್ಪ ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ನೀಡುತ್ತಿರುವ ಪ್ರೋತ್ಸಾಹ, ಸೌಲಭ್ಯಗಳನ್ನು ಕಂಡು ಅವರ ಬೆಂಬಲಕ್ಕೆ ನಿಲ್ಲಲು ಆರಂಭಿಸಿದ್ದಾರೆ.
ಬಡ ಕುಟುಂಬದಿಂದ ಬಂದ ನನಗೆ ಬಡ ವಿದ್ಯಾರ್ಥಿಗಳು ಓದಲು ಅನುಭವಿಸುವ ಸಂಕಷ್ಟಗಳ ಬಗ್ಗೆ ಅರಿವಿದೆ. ಅದರಲ್ಲೂ ಬಾಲಕಿಯರು ತಮ್ಮ ಗ್ರಾಮದಲ್ಲಿ ಶಾಲೆ, ಕಾಲೇಜು ಇಲ್ಲದಿದ್ದರೆ ಶಿಕ್ಷಣ ಮೊಟಕುಗೊಳಿಸುವಂತಾಗುತ್ತದೆ ಎನ್ನುವ ಕಾರಣಕ್ಕಾಗಿ ನಿವೃತ್ತಿ ನಂತರ ಬಾಲಕಿಯರಿಗಾಗಿ ವಸತಿ ನಿಲಯವನ್ನು ಆರಂಭಿಸಿದ್ದೇನೆ. ನಾನು ಮದುವೆಯಾಗಿಲ್ಲ. ನನ್ನ ಜೀವನವನ್ನು ಸಮಾಜಕ್ಕಾಗಿ ಮುಡುಪಿಟ್ಟಿರುವುದಕ್ಕೆ ಸಂತೋಷವಿದೆ. | ಈರಪ್ಪ ಸುಗೂರು ಸಮಾಜ ಸೇವಕ, ಅಂಬಾಮಠ
ಈರಪ್ಪನವರ ಸೇವೆ ಶ್ಲಾಘನೀಯ. ಬಾಲಕಿಯರ ವಸತಿ ನಿಲಯ ಆರಂಭಿಸಿ ತಮ್ಮ ಬದುಕನ್ನು ಸಂಪೂರ್ಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಒಂದು ಕೋಟಿ ರೂ.ಗೂ ಅಧಿಕ ಹಣವನ್ನು ಶೈಕ್ಷಣಿಕ ಚಟುವಟಿಕೆಗೆ ವಿನಿಯೋಗಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಸೇವೆ ಇತರರಿಗೆ ಮಾದರಿಯಾಗಿದೆ. | ಬಿ.ರವಿಯಪ್ಪ ನಿವೃತ್ತ ಮುಖ್ಯಶಿಕ್ಷಕ, ಅಂಬಾಮಠ.