

ಥಾಣೆ: ಪ್ರೀತಿ ಕುರುಡು, ಪ್ರೀತಿಸಿದವರಿಗಾಗಿ ಜನ ಏನೂ ಬೇಕಾದರೂ ಮಾಡಲು ಸಜ್ಜಾಗಿರುತ್ತಾರೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ ಗಡಿಯಾಚೆಗಿನ ಪ್ರೇಮಕಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಸೀಮಾ ಹೈದರ್, ಅಂಜು ಬಳಿಕ ಇದೀಗ ಮಹಾರಾಷ್ಟ್ರದ ಥಾಣೆಯ ಯುವತಿಯೊಬ್ಬಳು ತನ್ನ ಪ್ರಿಯಕರನಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಮಹಿಳೆ ಹೆಸರು ನಗ್ಮಾ ಎಂದು ತಿಳಿದು ಬಂದಿದ್ದು, ಈಕೆಗೆ 2021ರಲ್ಲಿ ಪಾಕಿಸ್ತಾನದ ಅಬೋಟಾಬಾದ್ನ ಬಾಬರ್ ಬಶೀರ್ ಅಹ್ಮದ್ ಎಂಬಾತ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದಾನೆ. ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದ ಇವರ ನಡುವೆ ದಿನ ಕಳೆದಂತೆ ಆತ್ಮೀಯತೆ ಹೆಚ್ಚಾಗಿದ್ದು, ಇದು ಪ್ರೀತಿಯಾಗಿ ಬದಲಾಗಿದೆ. ಇದಲ್ಲದೆ ಇವರಿಬ್ಬರು ಈ ವರ್ಷ ಫೆಬ್ರವರಿಯಲ್ಲಿ ಆನ್ಲೈನ್ನಲ್ಲೇ ಮದುವೆಯಾಗಿದ್ದರಂತೆ.
ತನ್ನ ಪ್ರಿಯಕರನನ್ನು ಭೇಟಿಯಾಗುವ ಸಲುವಾಗಿ ನಗ್ಮಾ ಪಾಸ್ಪೋರ್ಟ್ಗಾಗಿ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದಳಂತೆ. ಆದರೆ, ಆಕೆಯ ಅರ್ಜಿಯನ್ನು ರಾಯಭಾರ ಕಚೇರಿಯ ಅಧಿಕಾರಿಗಳು ತಿರಸ್ಕರಿಸಿದ್ದರಂತೆ. ಇದರಿಂದ ಸುಮ್ಮನಾಗದ ಈಕೆ ಪಾಕಿಸ್ತಾನದಲ್ಲಿರುವ ತನ್ನ ಪ್ರೇಮಿಯನ್ನು ಭೇಟಿ ಮಾಡಬೇಕೆಂದು ಪಣ ತೊಟ್ಟು ಅಡ್ಡದಾರಿ ಹಿಡಿದಿದ್ದಾಳೆ.
ಪಾಸ್ಪೋರ್ಟ್ ಪಡೆಯುವ ಸಲುವಾಗಿ ತನ್ನ ಹೆಸರನ್ನು ಸನಮ್ ಖಾನ್ ಎಂದು ಬದಲಿಸಿಕೊಂಡ ಈಕೆ ನಕಲಿ ಆಧಾರ್ ಕಾರ್ಡ್ ಬಳಸಿ ವೀಸಾಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾಳೆ. ಬಳಿಕ ಪಾಕ್ನಲ್ಲಿರುವ ತನ್ನ ಪ್ರಿಯಕರನನ್ನು ಭೇಟಿಯಾಗಿ ಜುಲೈ 17ರಂದು ಭಾರತಕ್ಕೆ ಹಿಂದಿರುಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಈಕೆಗೆ ನಕಲಿ ದಾಖಲೆ ಸೃಷ್ಟಿಸಲು ಸಹಾಯ ಮಾಡಿದವರನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳೆ ತಾಯಿ ನನ್ನ ಮಗಳನ್ನು ಪೊಲೀಸರು ಬಂಧಿಸಿಲ್ಲ. 2015 ರಲ್ಲಿ ನಗ್ಮಾ ತನ್ನ ಪತಿಯಿಂದ ಬೇರ್ಪಟ್ಟ ನಂತರ ತನ್ನ ಹೆಸರನ್ನು ಬದಲಾಯಿಸಿದ್ದಳು, ಜೊತೆಗೆ ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದ್ದಳು. 2021ರಲ್ಲಿ ಆಕೆ ಪಾಕಿಸ್ತಾನದ ಮೂಲದ ವ್ಯಕ್ತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಭೇಟಿಯಾಗಿದ್ದು, ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಲು ನಿರ್ಧರಿಸಿದರು. ಆ ಬಳಿಕ ಆಕೆ ಪಾಸ್ಪೋರ್ಟ್ ಮಾಡಿಸಿಕೊಂಡು ಗಂಡನ ಮನೆಗೆ ಭೇಟಿ ನೀಡಿದ್ದಾಳೆ. ಆದರೆ, ಪೊಲೀಸರು ಸುಳ್ಳು ಆರೋಪ ಹೊರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ.