

ನವದೆಹಲಿ: ಪ್ರಧಾನಿ ಮೋದಿ (PM Modi) ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುವಾಗ ಅನೇಕ ಬಾರಿ ಜನರ ನಡೆ ಅಪಾಯ ಎಂದು ಕಂಡು ಬಂದಲ್ಲಿ ಎಚ್ಚರಿಸುತ್ತಾರೆ. ಈ ರೀತಿಯ ಹಲವು ಘಟನೆಗಳು ನಡೆದಿದ್ದು, ಈ ಮೂಲಕ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಉದಾಗರಣೆಗಳಿವೆ. ಇದೀಗ ಪ್ರಧಾನಿ ಮೋದಿ (PM Modi) ಅವರು ಪತ್ರಕರ್ತರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳಿರುವ ಹೃದಯಸ್ಪರ್ಶಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮನಗೆಲ್ಲುತ್ತಿದೆ.
ದೆಹಲಿ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಟಿಕೆಟ್ ಹಂಚಿಕೆ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಶುಕ್ರವಾರ(ಜ.10) ಪ್ರಧಾನಿ ಮೋದಿ (PM Modi) ಅಧ್ಯಕ್ಷತೆಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿತ್ತು. ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಆದರೆ ದಹಲಿಯಲ್ಲಿ ವಿಪರೀತ ಚಳಿ ಶುರುವಾಗಿದೆ. ದೆಹಲಿ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸಲು ಬಿಜಪಿ ಕಚೇರಿಗ ಆಗಮಿಸಿದ ಮೋದಿ, ಕಾರಿನಿಂದ ಇಳಿದು ನೇರವಾಗಿ ಪತ್ರಕರ್ತರ ಬಳಿ ತೆರಳಿ ಮಾತನಾಡಿದ್ದಾರೆ.
ಚಳಿ ಕಾರಣ ಓವರ್ ಕೋಟ್ ಧರಿಸಿದ್ದ ಪ್ರಧಾನಿ ಮೋದಿ (PM Modi) ಕಾರಿನಿಂದ ಇಳಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಬಳಿಕ ಬಿಜೆಪಿ ಕಚೇರಿ ಹೊರಭಾಗದಲ್ಲಿದ್ದ ಪತ್ರಕರ್ತರ ಬಳಿ ಬಂದಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಲೊಹ್ರಿ ಹಾಗೂ ಮಕರ ಸಂಕ್ರಾತಿ ಹಬ್ಬದ ಶುಭಾಶಯ. ಚಳಿ ತೀವ್ರವಾಗಿದೆ. ನೀವು ಕನಿಷ್ಠ ತಲೆಯಾದರೂ ಕವರ್ ಮಾಡಿ. ನಿಮ್ಮ ಆರೋಗ್ಯದ ಕಡೆ ಗಮನ ಇರಲಿ. ಚಳಿಯಿಂದ ಬೆಚ್ಚೆಗಿರಲು ಬಟ್ಟೆಗಳನ್ನು ಧರಿಸಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 05ರಂದು ನಡೆಯಲಿದ್ದು, 08ರಂದು ಫಲಿತಾಂಶ ಪ್ರಕಟಿಸಲಿದೆ. ಈಗಾಗಲೇ ಬಿಜೆಪಿ-ಎಎಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೆಲವು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಇನ್ನಷ್ಟೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ.