

ತಮಿಳುನಾಡು: ತಮಿಳು ಚಿತ್ರನಟ ದಳಪತಿ ವಿಜಯ್ (Thalapathy Vijay) ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ಹಿನ್ನೆಲೆ ವಿಜಯ್ ಅಭಿನಯಿಸಲಿರುವ ಕೊನೆಯ ಸಿನಿಮಾ 'ದಳಪತಿ 69' ಎನ್ನಲಾಗಿದೆ. ಈ ಮಧ್ಯೆ ಇಂದು ಚೆನ್ನೈನಲ್ಲಿ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿದ ಚಿತ್ರತಂಡ ಒಂದು ಹಾಡಿನ ಚಿತ್ರೀಕರಣದ ಮೂಲಕ ಸಿನಿಮಾದ ಶೂಟಿಂಗ್ ಪ್ರಾರಂಭಿಸಲು ಸಜ್ಜಾಗಿದೆ. ಈ ಬಗ್ಗೆ ಶೀಘ್ರವೇ ಚಿತ್ರ ತಯಾರಕರು ಹಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇ ಆದರೂ ದಳಪತಿ ಅಭಿಮಾನಿಗಳು (Vijay Fans) ಮಾತ್ರ ತೀವ್ರ ಬೇಸರಕ್ಕೆ ಒಳಗಾಗಿದ್ದಾರೆ.
ದಳಪತಿ ನಟಿಸಲಿರುವ ಕಡೆಯ ಚಿತ್ರ ಇದಾದ ಹಿನ್ನಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದ್ದು, ತಮ್ಮ ನೆಚ್ಚಿನ ನಟನ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ತೆಲುಗು ಚಿತ್ರರಂಗದಲ್ಲಿ ಬಿಡುಗಡೆಗೊಂಡ ಸಿನಿಮಾವೊಂದರ ಕಥೆಯನ್ನೇ 'ದಳಪತಿ 69' ಚಿತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಇದು ಫ್ಯಾನ್ಸ್ಗಳಲ್ಲಿ ಆತಂಕ ಮೂಡಿಸಿದ್ದು, ಇಂತಹ ಅನ್ಯಾಯ ನಮ್ಮ ನಟನಿಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಬಾಲಯ್ಯ ನಟಿಸಿದ 'ಭಗವಂತ್ ಕೇಸರಿ' ಸಿನಿಮಾದ ಕಥೆಯನ್ನೇ 'ದಳಪತಿ 69' ಚಿತ್ರದಲ್ಲಿ ಅಳವಡಿಸಕೊಳ್ಳಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡಿದೆ. ವಿಜಯ್ ಕಡೆಯ ಚಿತ್ರಕ್ಕೆ ರಿಮೇಕ್ ಆಯ್ಕೆ ಏಕೆ ಬೇಕು? ಅವರಿಗಾಗಿ ಒಳ್ಳೆಯ ಕಥೆಯನ್ನು ತಯಾರಿಸಿಕೊಳ್ಳಿ. ಅದನ್ನು ಬಿಟ್ಟು ಇಂತಹ ರಿಮೇಕ್ ಕೆಲಸಕ್ಕೆ ಕೈಹಾಕಿ, ನಮ್ಮ ಮನಸಿಗೆ ಘಾಸಿ ಉಂಟುಮಾಡಬೇಡಿ ಎಂದು ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).