ಫೇಸ್​ ಮಾಸ್ಕ್​ ಧರಿಸದೇ ಇದ್ದಲ್ಲಿ ವಿದೇಶಿ ಪ್ರವಾಸಿಗರನ್ನು ಒದ್ದು ಹೊರ ಹಾಕಲಾಗುವುದು: ಥಾಯ್ಲೆಂಡ್​ ಆರೋಗ್ಯ ಸಚಿವ

Thayland
Published on

ಥಾಯ್ಲೆಂಡ್​: ಜಗತ್ತಿನಾದ್ಯಂತ ಕೊರೊನಾ ವೈರಸ್​ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಥಾಯ್ಲೆಂಡ್​​ ಆರೋಗ್ಯ ಸಚಿವರು ವಿದೇಶಿ ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡಿದ್ದು, ಫೇಸ್​ ಮಾಸ್ಕ್​ ಧರಿಸದೇ ಬಂದಲ್ಲಿ ಒದ್ದು ಹೊರಗೆ ಹಾಕಲಾಗುವುದು ಎಂದಿದ್ದಾರೆ.

ಕೊರೊನಾ ವೈರಸ್​ನಿಂದಾಗಿ ಈವರೆಗೂ 811 ಮಂದಿ ಸಾವಿಗೀಡಾಗಿದ್ದು, 31,774 ಮಂದಿ ಸೋಂಕು ತಗುಲಿರುವುದಾಗಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಈ ಸೋಂಕಿನಿಂದಾಗಿ ಪ್ರವಾಸದ ಮೇಲೆ ಭಾರಿ ಪರಿಣಾಮ ಬೀರಿದ್ದು, ಇತರೆ ದೇಶಗಳು ಚೀನಾ ಭೇಟಿ ಹಾಗೂ ಸೋಂಕಿತರ ವಿದೇಶ ಭೇಟಿಯನ್ನು ನಿರ್ಭಂದಿಸಿವೆ.

ಥಾಯ್ಲೆಂಡ್​ನಲ್ಲಿ 25 ಕೊರೊನಾ ವೈರಸ್​ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 9 ರೋಗಿಗಳು ಗುಣವಾಗಿದ್ದಾರೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಥಾಯ್ಲೆಂಡ್​ ಬೀದಿಗಳು, ಸಾರ್ವಜನಿಕ ಸಾರಿಗೆಗಳು ಹಾಗೂ ಶಾಪಿಂಗ್​ ಕೇಂದ್ರಗಳು ಎಲ್ಲಿ ನೋಡಿದರು ಜನರು ಮುಖಕ್ಕೆ ಮಾಸ್ಕ್​ ಧರಿಸಿ ಓಡಾಡುತ್ತಿದ್ದಾರೆ.

ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಬ್ಯಾಂಕಾಕ್​ನ ಜನನಿಬಿಡ ಸ್ಕೈಟ್ರೈನ್​ನಲ್ಲಿ ಮಾಸ್ಕ್​ಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದ ಆರೋಗ್ಯ ಸಚಿವ ಅನುತಿನ್​ ಛರ್ನ್​ವಿರಕುಲ್​, ವಿದೇಶಿ ಪ್ರವಾಸಿಗರು ಮಾಸ್ಕ್​​ಗಳನ್ನು ತೆಗೆದುಕೊಳ್ಳಲಿಲ್ಲ. ಅವರು ಯಾವುದಕ್ಕೂ ಹೆದರುವುದಿಲ್ಲ ಎಂಬಂತೆ ವರ್ತಿಸಿದ್ದಾರೆ. ಇಂತಹ ಜನರನ್ನು ಥಾಯ್ಲೆಂಡ್​ನಿಂದ ಒದ್ದು ಹೊರಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಾಸ್ಕ್​ ಕ್ಯಾಂಪೇನ್​ಗೆ ಕೆಲ ಯೂರೋಪ್​ ಪ್ರವಾಸಿಗರು ಸಹಕಾರ ನೀಡದಿದ್ದಕ್ಕೆ ತಾಳ್ಮೆ ಕಳೆದುಕೊಂಡು ಅನುತಿನ್​ ಕೂಗಾಡಿದರು. ಆದರೆ, ಬಳಿಕ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಈ ಬಗ್ಗೆ ಕ್ಷಮೆಯನ್ನು ಯಾಚಿಸಿದ್ದಾರೆ.

ಸುಮಾರು 10 ಮಿಲಿಯನ್​ಗಿಂತಲೂ ಹೆಚ್ಚು ಚೀನಾ ಪ್ರವಾಸಿಗರು ಕಳೆದ ವರ್ಷ ಥಾಯ್ಲೆಂಡ್​ಗೆ ಭೇಟಿ ನೀಡಿದ್ದಾರೆ. ಇದೀಗ ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯು ಕಡಿಮೆಯಾಗಲಿದ್ದು, ವಿಶೇಷ ನಿಗಾವನ್ನು ಥಾಯ್ಲೆಂಡ್​ ಸರ್ಕಾರ ಇರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net