

ಬ್ಯಾಂಕಾಕ್: ಪತ್ರಕರ್ತರು ಪ್ರಶ್ನೆ ಕೇಳಿದಾಗ ರಾಜಕಾರಣಿಗಳು ಅಥವಾ ಉನ್ನತ ಅಧಿಕಾರದಲ್ಲಿರುವವರು ಇರಿಸು ಮುರಿಸಿಗೆ ಒಳಗಾಗುವುದು ಸಾಮಾನ್ಯ. ಇರಿಸು ಮುರಿಸಿಗೆ ಒಳಗಾದವರು ಹೇಗೋ ತಮ್ಮ ಮಾತಿನಿಂದ ತೇಪೆ ಹಚ್ಚುತ್ತಾರೆ.
ಆದರೆ, ಇನ್ನೂ ಕೆಲವು ಜಾಗತಿಕ ನಾಯಕರು ಪತ್ರಕರ್ತರೆದುರು ದರ್ಪ ಮೆರೆಯುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರನ್ನು ಹೊರಗೆ ಕಳಿಸುತ್ತಾರೆ. ಆದರೆ, ಇದೇ ವಿಷಯವಾಗಿ ಥಾಯ್ಲ್ಯಾಂಡ್ ಪ್ರಧಾನಿ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ನಡೆದುಕೊಂಡಿದ್ದು ಜಾಗತಿಕವಾಗಿ ವೈರಲ್ ಆಗಿದೆ.
ಪತ್ರಿಕಾಗೊಷ್ಟಿ ನಡೆಯುವಾಗ ಪತ್ರಕರ್ತರ ಪ್ರಶ್ನೆಗೆ ಕಸಿವಿಸಿಗೊಂಡ ಥಾಯ್ಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್ ಓಚಾ ಏಕಾಏಕಿ ಹ್ಯಾಂಡ್ ಸ್ಯಾನಿಟೈಸರ್ ತೆಗೆದುಕೊಂಡು ಪತ್ರಕರ್ತರ ಮುಖಕ್ಕೆ ಸಿಂಪಡಣೆ ಮಾಡಿದ್ದಾರೆ. ನಿಮ್ಮ ಪ್ರಶ್ನೆಗಳಲ್ಲಿ ಕೆಟ್ಟ ವೈರಸ್ ಇದೆ. ಮೊದಲು ಅದನ್ನು ಮಟ್ಟ ಹಾಕಬೇಕು ಎಂದು ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಇದರಿಂದ ಅವಾಕ್ಕಾದ ಪತ್ರಕರ್ತರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಪ್ರಧಾನಿ ಪ್ರಯುತ್ ಚಾನ್ ಸಚಿವ ಸಂಪುಟದ ಮೂವರು ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಿಸಲಾಗದೇ ಚಾನ್ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. 2012 ರಿಂದ ಚಾನ್ ಥಾಯ್ಲ್ಯಾಂಡ್ ಪ್ರಧಾನಿಯಾಗಿದ್ದಾರೆ. ವಿಡಿಯೋ ವೈರಲ್ ಆಗಿದೆ. (ಏಜೇನ್ಸಿಸ್)