

Conflict: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಸಂಘರ್ಷ ಭುಗಿಲೆದ್ದಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಈ ವಿವಾದದ ಕೇಂದ್ರಬಿಂದು ಹಿಂದೂ ದೇವಾಲಯ ಎಂಬ ಅಚ್ಚರಿ ಸಂಗತಿ ಸದ್ಯ ಹಲವರ ಕುತೂಹಲ ಮತ್ತು ಗೊಂದಲಕ್ಕೆ ಕಾರಣವಾಗಿದೆ.
ಕಾಂಬೋಡಿಯಾದ ಡೊಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ 900 ವರ್ಷಗಳಷ್ಟು ಹಳೆಯದಾದ ಪ್ರಿಯಾ ವಿಹಿಯರ್ ದೇವಾಲಯವು ಪರಮಾತ್ಮನಿಗೆ ಸಮರ್ಪಿತವಾದ ದೇವಸ್ಥಾನ ಎನ್ನಲಾಗಿದೆ. ಇದನ್ನು ಖಮೇರ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಕಾಂಬೋಡಿಯನ್ನರಿಗೆ ಮಾತ್ರವಲ್ಲದೆ ಥೈಸ್‌ನವರಿಗೂ ಪವಿತ್ರ ಸ್ಥಳ ಎಂಬುದು ಗಮನಾರ್ಹ. ಇದರಿಂದ ಸುಮಾರು 95 ಕಿಲೋಮೀಟರ್ ಪಶ್ಚಿಮಕ್ಕೆ 12ನೇ ಶತಮಾನದ ತಾ ಮುಯೆನ್ ಥಾಮ್ ಶಿವ ದೇವಾಲಯವಿದೆ.
ದಶಕಗಳಿಂದ, ದೇವಾಲಯ ಸಂಕೀರ್ಣವು ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ದೇಗುಲದ ವಿಚಾರದಲ್ಲಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಘರ್ಷಣೆಗಳು ನಡೆಯುತ್ತಿವೆ. ಗುರುವಾರ (ಜು.24) ಥೈಲಾಂಡ್-ಕಾಂಬೋಡಿಯನ್ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದ್ದು, ದಾಳಿಯಲ್ಲಿ 12 ಜನರು ಮೃತಪಟ್ಟರೆ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಕಾಂಬೋಡಿಯನ್ ಸೇನೆಯು ಥೈಲಾಂಡ್ ಮಿಲಿಟರಿ ನೆಲೆಗಳ ಮೇಲೆ ಹದ್ದಿನ ಕಣ್ಣಿಡಲು ಡ್ರೋನ್‌ಗಳನ್ನು ಕಳುಹಿಸಿದ ಬೆನ್ನಲ್ಲೇ ಘರ್ಷಣೆ ಭುಗಿಲೆದ್ದಿತು.
ಥೈಲ್ಯಾಂಡ್ ಎಲ್ಲಾ ಗಡಿ ದಾಟುವಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಸುಮಾರು 40,000 ನಾಗರಿಕರನ್ನು 86 ಹಳ್ಳಿಗಳಿಗೆ ಸ್ಥಳಾಂತರಿಸಿತು. ಈ ಗಡಿ ವಿವಾದ ದಶಕಗಳಿಂದ ಸಾಗುತ್ತಾ ಬಂದಿದೆ. 1962ರಲ್ಲಿ, ಅಂತಾರಾಷ್ಟ್ರೀಯ ನ್ಯಾಯಾಲಯವು ಕಾಂಬೋಡಿಯಾದ ಪರವಾಗಿ ತೀರ್ಪು ನೀಡಿತು. 1954ರ ಬಳಿಕ ಅದು ಶಿಲ್ಪಗಳನ್ನು ಹಿಂತಿರುಗಿಸಲು ಮತ್ತು ಥೈಲಾಂಡ್ ಪಡೆಗಳನ್ನು ಹಿಂತೆಗೆದುಕೊಳ್ಳಲು ಆದೇಶಿಸಿತು. ಈ ತೀರ್ಪು 1907ರ ಫ್ರೆಂಚ್ ನಕ್ಷೆಯನ್ನು ಆಧರಿಸಿದೆ. ಆ ನಕ್ಷೆಯ ಪ್ರಕಾರ, ದೇವಾಲಯವು ಕಾಂಬೋಡಿಯಾದೊಳಗಿದೆ. ಇದೇ ವೇಳೆ ಸಿಯಾಮ್ (ಈಗಿನ ಥೈಲ್ಯಾಂಡ್) ಈ ನಕ್ಷೆಯನ್ನು ಒಪ್ಪಿಕೊಂಡಿತು.
ಇದಾದ ಬಳಿಕ ಅದು, ಗಡಿಯು ಪರ್ವತ ರೇಖೆಗಳನ್ನು ಆಧರಿಸಿದೆ ಎಂದು ತಪ್ಪಾಗಿ ಭಾವಿಸಿದೆ ಎಂದು ವಾದಿಸಿತು. ಆದರೆ, ನ್ಯಾಯಾಲಯವು ಆ ವಾದವನ್ನು ತಿರಸ್ಕರಿಸಿತು ಮತ್ತು ನಕ್ಷೆಯನ್ನು ಒಪ್ಪಿಕೊಂಡಿದ್ದ ಥೈಲ್ಯಾಂಡ್ ಅದನ್ನು ಪಾಲಿಸಬೇಕು ಎಂದು ತೀರ್ಪು ನೀಡಿತು. 2013ರಲ್ಲಿ, 2011ರ ಘರ್ಷಣೆಗಳ ಹಿನ್ನಲೆ ನ್ಯಾಯಾಲಯವು ತನ್ನ ಆರಂಭಿಕ ತೀರ್ಪನ್ನು ಪರಿಶೀಲಿಸಿತು. ಕಾಂಬೋಡಿಯಾವು ದೇವಾಲಯದ ಮೇಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಹಕ್ಕುಗಳನ್ನು ಹೊಂದಿದೆ ಎಂದು ಹೇಳಿತು. ಈ ಮೂಲಕ ಅಲ್ಲಿಂದ ಥೈಲಾಂಡ್ ಸೈನ್ಯವನ್ನು ಹೊರಹೋಗುವಂತೆ ಕೋರ್ಟ್ ಆದೇಶಿಸಿತು.
ಪ್ರಸ್ತುತ ಘರ್ಷಣೆಗಳು ತಾ ಮುಯೆನ್ ಥಾಮ್ ದೇವಾಲಯದ ಸುತ್ತ ಕೇಂದ್ರೀಕೃತವಾಗಿವೆ. ಡೊಂಗ್ರೆಕ್ ಪರ್ವತಗಳಲ್ಲಿನ ಅರಣ್ಯದ ಗಡಿಯಲ್ಲಿರುವ ಈ ಖಮೇರ್ ಹಿಂದೂ ಸಂಕೀರ್ಣವು, ಮೂರು ಪ್ರಮುಖ ದೇವಾಲಯಗಳನ್ನು ಹೊಂದಿದೆ. ತಾ ಮುಯೆನ್ ಥಾಮ್, ತಾ ಮುಯೆನ್ ಮತ್ತು ತಾ ಮುಯೆನ್ ಥಾಟ್. ತಾ ಮುಯೆನ್ ಥಾಮ್ ದೇವಾಲಯವು ದಕ್ಷಿಣಕ್ಕೆ ಎದುರಾಗಿರುವ ಗರ್ಭಗುಡಿಯನ್ನು ಹೊಂದಿದೆ. ಇದು ವಿಶಿಷ್ಟ ಖಮೇರ್ ದೇವಾಲಯದ ವಾಸ್ತುಶಿಲ್ಪಕ್ಕಿಂತ ಭಿನ್ನವಾಗಿದೆ. ಗರ್ಭಗುಡಿಯು ನೈಸರ್ಗಿಕವಾಗಿ ರೂಪುಗೊಂಡ ಶಿವಲಿಂಗವನ್ನು ಹೊಂದಿದೆ.
ದೇವಾಲಯದ ಸ್ಥಳವು ಆಗಾಗ್ಗೆ ಸಂಘರ್ಷದ ಕೇಂದ್ರವನ್ನಾಗಿ ಮಾಡಿದೆ. ಫೆಬ್ರವರಿಯಲ್ಲಿ, ಕಾಂಬೋಡಿಯನ್ ಸೈನಿಕರು ದೇವಾಲಯದಲ್ಲಿ ತಮ್ಮ ರಾಷ್ಟ್ರಗೀತೆಯನ್ನು ಹಾಡಿದರು. ಥೈಲಾಂಡ್ ಯೋಧರನ್ನು ಕೆರಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು,(ಏಜೆನ್ಸೀಸ್).