ಚಿತ್ರಮಂದಿರಕ್ಕೆ ಕೈಬೀಸಿ ಕರೆಯುತ್ತಿವೆ ಈ 3 ಕನ್ನಡ ಸಿನಿಮಾಗಳು! ದ್ವಿತೀಯಾರ್ಧದಲ್ಲಿ ಸ್ಯಾಂಡಲ್​ವುಡ್​ ಕಮಾಲ್​​ | Sandalwood

ವಿಜಯವಾಣಿ (67)
Published on

Sandalwood: ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಗೊಂಡ ಹಲವಾರು ಕನ್ನಡ ಸಿನಿಮಾಗಳ ಪೈಕಿ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ. ಸ್ಟಾರ್​ ನಟರು ಹಾಗೂ ಹೊಸಬರ ಚಿತ್ರಗಳು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದಿದ್ದೇ ಆದರೂ ಬಾಕ್ಸ್ ಆಫೀಸ್​ನಲ್ಲಿ ಲಾಭ ನೋಡುವಲ್ಲಿ ವಿಫಲವಾಯಿತು. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟವನ್ನು ಉಂಟುಮಾಡಿದೆ. ಮೊದಲಾರ್ಧದಲ್ಲಿ ಈ ರೀತಿ ಸೋಲನ್ನು ಕಂಡ ಚಿತ್ರೋದ್ಯಮಕ್ಕೆ ದ್ವಿತೀಯಾರ್ಧದಲ್ಲಿ ಗೆಲುವೆಂಬ ಹೊಸ ಚಿಗುರಿನ ಅನಿವಾರ್ಯತೆ ಎದುರಾಗಿತ್ತು. ಅಂತೆಯೇ ಆ ಗೆಲುವೀಗ ಲಭಿಸಿದೆ.

ಭರ್ಜರಿ ಕಮ್​ಬ್ಯಾಕ್​!

ಮಲಯಾಳಂ, ತಮಿಳು, ತೆಲುಗು ಚಿತ್ರರಂಗದಿಂದ ಹೊರಬರುತ್ತಿರುವ ಹಲವಾರು ಸಿನಿಮಾಗಳು ಕಳೆದ ಆರು ತಿಂಗಳಲ್ಲಿ ಭಾರತೀಯ ಚಿತ್ರೋದ್ಯಮದಲ್ಲಿ ಸಾಕಷ್ಟು ಗಳಿಕೆಯನ್ನು ಕಂಡಿದೆ. ಕೇವಲ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲಿ ಕೂಡ ಅದ್ಭುತ ಪ್ರತಿಕ್ರಿಯೆ ವಿಮರ್ಶೆ ಮತ್ತು ಲಾಭವನ್ನು ನೋಡಿದೆ. ಆದರೆ, ಸ್ಯಾಂಡಲ್​ವುಡ್​ ಈ ಗೆಲುವನ್ನು ನೋಡದೆ ಇದ್ದದ್ದು, ಕನ್ನಡ ಚಿತ್ರಪ್ರೇಮಿಗಳಿಗೆ ಮತ್ತು ಕಲಾವಿದರ ಬಳಗಕ್ಕೆ ಭಾರೀ ಬೇಸರ, ಚಿಂತೆಯನ್ನು ತಂದೊಡ್ಡಿತ್ತು. ಆದರೀಗ, ಸೆಕೆಂಡ್​ ಆಫ್​ನಲ್ಲಿ ಸ್ಯಾಂಡಲ್​ವುಡ್​ ಭರ್ಜರಿ ಗೆಲುವು ನೋಡುವುದಲ್ಲದೇ ಇತರೆ ಚಿತ್ರರಂಗದ ಚಿತ್ರಗಳಿಗೆ ಸಖತ್​ ಟಕ್ಕರ್​ ಕೊಡುವುದು ಖಚಿತವಾಗಿದೆ. ಅದಕ್ಕೆ ಈಗ ರಿಲೀಸ್ ಆಗಿರುವ ಸಿನಿಮಾಗಳು ಮತ್ತು ಮುಂಬರುವ ತಿಂಗಳಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಚಿತ್ರಗಳೇ ಸಾಕ್ಷಿ.

ಚಿತ್ರಮಂದಿರಕ್ಕೆ ಕೈಬೀಸಿ ಕರೆಯುತ್ತಿವೆ ಈ 3 ಚಿತ್ರ

1. ಸು ಫ್ರಮ್ ಸೋ (ಕನ್ನಡ)

ಮತ್ತೊಂದು ಕ್ವಾಲಿಟಿ ಕಂಟೆಂಟ್​ ಮೂಲಕ ಕನ್ನಡ ಸಿನಿರಸಿಕರ ಎದುರಿಗೆ ಹಾಜರಾಗಿರುವ ನಿರ್ದೇಶಕ, ನಿರ್ಮಾಪಕ ರಾಜ್​ ಬಿ.ಶೆಟ್ಟಿ, ಸು ಫ್ರಮ್​ ಸೋ ಎಂಬ ಹಾಸ್ಯ ಕಥಾಹಂದರ ಸಿನಿಮಾವನ್ನು ಜನರ ಮುಂದಿಟ್ಟಿದ್ದಾರೆ. ಬರಹಗಾರ, ನಿರ್ದೇಶಕ ಜೆ.ಪಿ. ತುಮಿನಾಡ್ ಬರೆದು, ನಿರ್ದೇಶಿಸಿರುವ ಈ ಚಿತ್ರವು ಚಿತ್ರಮಂದಿರಕ್ಕೆ ಬಂದ ಸಿನಿಪ್ರೇಕ್ಷಕನನ್ನು ನಗಿಸಿ, ಅವರ ಹೊಟೆಯನ್ನು ಹುಣ್ಣಾಗಿಸಿದೆ ಕಳಿಸುವುದಿಲ್ಲ ಎಂಬುದನ್ನು ವಿಮರ್ಶೆ ಮತ್ತು ವ್ಯಾಪಕ ಪ್ರಶಂಸೆಗಳ ಮೂಲಕ ಸಾಬೀತುಪಡಿಸಿದೆ. ಚಿತ್ರಕ್ಕೆ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಹರಿದುಬರುತ್ತಿವೆ. ಕಳೆದ ಕೆಲವು ದಿನಗಳಿಂದ 'ಸು ಫ್ರಮ್ ಸೋ'ಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯದ ಹಲವಾರು ಚಿತ್ರಮಂದಿರಗಳು ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿವೆ.

2. ಜೂನಿಯರ್​ (ಕನ್ನಡ)

ಯುವನಟ ಕಿರೀಟಿ, ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಜೂನಿಯರ್​ ಚಿತ್ರವು ಕೂಡ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದೇ ಜುಲೈ 18ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಜೂನಿಯರ್​, ರಿಲೀಸ್ ಆದ ಮೊದಲನೇ ವಾರವೇ ಭರ್ಜರಿ ರೆಸ್ಪಾನ್ಸ್​ ಹಾಗೂ ಉತ್ತಮ ಗಳಿಕೆಯತ್ತ ಸಾಗಿದೆ. ಹಿರಿಯ ನಟ ಶಿವರಾಜ್​ಕುಮಾರ್​ ಅಭಿನಯಿಸಿರುವ ಚಿತ್ರವು ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕೈಬೀಸಿ ಕರೆಯುತ್ತಿವೆ. ಇದು ಕನ್ನಡ ಚಿತ್ರಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಗಾಲಿ ಜನಾರ್ಧನ್​ ರೆಡ್ಡಿ ಅವರ ಪುತ್ರ ಕಿರೀಟಿ ನಟಿಸಿರುವ ಚೊಚ್ಚಲ ಚಿತ್ರ ಇದಾಗಿದ್ದು, ಬಾಲಿವುಡ್​ ತಾರೆ ಜೆನಿಲಿಯಾ, ಕ್ರೇಜಿಸ್ಟಾರ್​ ವಿ. ರವಿಚಂದ್ರನ್​ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

3. ಎಕ್ಕ (ಕನ್ನಡ)

ನಟ ಯುವ ರಾಜ್​ಕುಮಾರ್, ನಟಿ ಸಂಜನಾ ಆನಂದ್​ ಮತ್ತು ಸಂಪದ ಅಭಿನಯಿಸಿರುವ ಬಹುನಿರೀಕ್ಷಿತ ಎಕ್ಕ, ರಿಲೀಸ್ ಆದ ಮೊದಲ ದಿನವೇ ಸಖತ್​ ರೆಸ್ಪಾನ್ಸ್​ ಪಡೆದಿದೆ. ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿರುವ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದ ಎಕ್ಕ, ಭರ್ಜರಿ ಓಪನಿಂಗ್ ಪಡೆದು ಇಂದಿಗೂ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರದರ್ಶನವನ್ನೇ ಕಾಣುತ್ತಿದೆ. ಒಟ್ಟಾರೆ, ಪ್ರತಿವಾರ ತೆರೆ ಕಾಣುತ್ತಿರುವ ಹಲವಾರು ಕನ್ನಡ ಸಿನಿಮಾಗಳ ಪೈಕಿ ದ್ವಿತೀಯಾರ್ಧದ ಶುರುವಿನಲ್ಲೇ ಸ್ಯಾಂಡಲ್​ವುಡ್​ ಅಬ್ಬರ ಜೋರಾಗಿದೆ. ಬೇರೆ ಚಿತ್ರರಂಗದ ಸಿನಿಮಾಗಳಿಗಿಂತ ನಮ್ಮ ಚಿತ್ರಗಳಲ್ಲೇ ಪೈಪೋಟಿ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net