ಭಯಾನಕ ಘಟನೆಗೆ ಬೆಚ್ಚಿಬಿದ್ದ ಜನ: ಹೆಬ್ಬಾವಿನೊಂದಿಗೆ ಎರಡು ಗಂಟೆ ಸೆಣೆಸಿದ ವೃದ್ಧೆ..ಹಾಗಾದರೆ ಏನಾಯಿತು?

python
Published on

ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಬಳಿ ಭಯಾನಕ ಘಟನೆಯೊಂದು ನಡೆದಿದೆ. 64 ವರ್ಷದ ವೃದ್ಧೆಯನ್ನು ಹೆಬ್ಬಾವು ಎರಡು ಗಂಟೆ ಗಳ ಕಾಲ ಕುತ್ತಿಗೆ ಸೇರಿದಂತೆ ಇಡೀ ದೇಹವನ್ನು ಬಿಗಿಯಾಗಿ ಹಿಡಿದಿತ್ತು. ಸಾವು ಬದುಕಿನ ನಡುವೆ ಹೋರಾಡಿದ ಆಕೆಯನ್ನು ಪೊಲೀಸರು ಅರ್ಧಗಂಟೆ ಪ್ರಾಯಾಸಪಟ್ಟು ರಕ್ಷಿಸಿದ್ದಾರೆ.

ಬ್ಯಾಂಕಾಕ್ ಹೊರವಲಯದ ತನ್ನ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದ ಅರೋಮ್ ಅವರ ಕಾಲಿಗೆ ಹಠಾತ್ ಕಚ್ಚಿದ ಅನುಭವವಾಗಿದೆ. ಆಕೆ ಏನಾಯಿತೆಂದು ನೀಡುವಷ್ಟರಲ್ಲಿ ಸೊಂಟ, ಬಳಿಕ ಇಡೀ ದೇಹವನ್ನು ಸುತ್ತಿಕೊಂಡಿದೆ.

16 ಅಡಿ ಉದ್ದದ ಹೆಬ್ಬಾವು ಸಂಪೂರ್ಣ ದೇಹವನ್ನು ಸುತ್ತಿಕೊಳ್ಳುತ್ತಿದ್ದಂತೆ ಅರೋಮ್​ ಕಿರುಚಿದ್ದಾರೆ. ನೆಲದ ಮೇಲೆ ಬಿದ್ದ ಆಕೆ ಹೆಬ್ಬಾವಿನ ಹಿಡಿತದಿಂದ ಬಿಡಿಸಿಕೊಳ್ಳಲು ಒಂದೂವರೆ ಗಂಟೆ ಹೆಣಗಾಡಿದ್ದಾಳೆ.

ಆಕೆಯ ಚೀರಾಟ ಕೇಳಿ ನೆರೆಹೊರೆಯವರು ಬಂದರು. ಆದರೆ ಹಾವು ತುಂಬಾ ದೊಡ್ಡದಿದ್ದಿದ್ದರಿಂದ ಯಾರೂ ಅದರ ಬಳಿಗೆ ಸುಳಿಯುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದರು.

ಪೊಲೀಸರು ಬಂದು ನೋಡುವಷ್ಟರಲ್ಲಿ ವೃದ್ಧೆ ಕಾಣದಷ್ಟು ಹೆಬ್ಬಾವು ಆಕೆಯನ್ನು ಸುತ್ತುವರಿದಿತ್ತು. ಕಡೆಗೆ ಅರ್ಧಗಂತೆ ತುಂಬಾ ಕಷ್ಟಪಟ್ಟು ಹೆಬ್ಬಾವನ್ನು ವೃದ್ಧೆಯ ದೇಹದಿಂದ ಬೇರ್ಪಡಿಸಿದರು. ವೃದ್ಧೆ ಅರೋಮ್​ಗೆ ಇನ್ನೂ ಜೀವ ಇರುವುದರನ್ನು ಮನಗಂಡು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ವೃದ್ಧೆ ಈಗ ಬದುಕಿದೆಯಾ ಬಡಜೀವ ಎಂಬಂತೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net