ಕಾರು ಬಿಡಿಭಾಗಗಳಿಂದ ವೆಂಟಿಲೇಟರ್​ ತಯಾರಿಸಿದ ಟೆಸ್ಲಾ ಏಲಾನ್​ ಮಸ್ಕ್​ ಕಂಪನಿಯಿಂದ ವಿನೂತನ ಪ್ರಯತ್ನ

tesla
Published on

ನವದೆಹಲಿ: ವಿದ್ಯುತ್​ಚಾಲಿತ ಕಾರುಗಳ ತಯಾರಿಕೆ ಹಾಗೂ ಅಂತರಿಕ್ಷ ಪ್ರಯಾಣಕ್ಕೆ ರಾಕೆಟ್​ ಉತ್ಪಾದನೆಯಲ್ಲಿ ನಿರತವಾಗಿ ಪ್ರಸಿದ್ಧಿ ಪಡೆದಿರುವ ಕಂಪನಿ ಟೆಸ್ಲಾ. ಹಲವು ವಿನೂತನ ಯೋಜನೆಗಳಿಗಾಗಿ ಸದಾ ಸುದ್ದಿಯಲ್ಲಿರುವ ಟೆಸ್ಲಾ ಕಂಪನಿ ಮುಖ್ಯಸ್ಥ ಏಲಾನ್​ ಮಸ್ಕ್​ ಇದೀಗ ಮತ್ತೊಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.

ಸದ್ಯ ಜಗತ್ತು ಕರೊನಾದ ಕಪಿಮುಷ್ಠಿಯಲ್ಲಿದೆ. ವೈದ್ಯಕೀಯ ಉಪಕರಣಗಳಿಗಾಗಿ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ರೋಗಿಗಳಿಗೆ ಕೃತಕ ಉಸಿರಾಟ ನೀಡಲು ಬಳಸಲಾಗುವ ವೆಂಟಿಲೇಟರ್​ಗಳು ಬೇಕೆಂದು ಬಹುತೇಕ ಎಲ್ಲ ರಾಷ್ಟ್ರಗಳು ಕೋರುತ್ತಿವೆ.

ಇದೀಗ ಕಾರುಗಳ ಬಿಡಿಭಾಗಗಳಿಂದ ತಾನೇ ವೆಂಟಿಲೇಟರ್​ ತಯಾರಿಸುವ ಮೂಲಕ ಟೆಸ್ಲಾ ಜಗತ್ತಿನ ಗಮನ ಸೆಳೆದಿದೆ. ಟೆಸ್ಲಾ ಉದ್ಯೋಗಿಯೊಬ್ಬರು ವೆಂಟಿಲೇಟರ್​ ಕಾರ್ಯನಿರ್ವಹಣೆಯನ್ನು ವಿವರಿಸುತ್ತಿರುವ ವಿಡಿಯೋವೊಂದು ಭಾರಿ ವೈರಲ್​ ಆಗಿದೆ.

ಈ ವೆಂಟಿಲೇಟರ್​ನಲ್ಲಿ ಹಲವು ಭಾಗಗಳು ಕಾರಿನ ಬಿಡಿಭಾಗಗಳೇ ಆಗಿವೆ ಎನ್ನುವುದು ವಿಶೇಷ. ಟೆಸ್ಲಾದ ಮಾಡೆಲ್​ 3ರಲ್ಲಿ ಬಳಸಲಾಗಿರುವ ಎಚ್​ವಿಎಸಿ ಸಿಸ್ಟಂ, ಸೆಂಟರ್​ ಸ್ಕ್ರೀನ್​, ಇನ್ಫೋಟೈನ್​ಮೆಂಟ್ ಸಿಸ್ಟಂಅನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಟೆಸ್ಲಾ ಉದ್ಯೋಗಿ ವಿವರಿಸುತ್ತಾರೆ. ಆದರೆ, ಈ ವೆಂಟಿಲೇಟರ್​ಗಳನ್ನು ಉತ್ಪಾದಿಸಲು ಕಂಪನಿ ಮುಂದಾಗಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಸದ್ಯ ಟೆಸ್ಲಾ ರೂಪಿಸಿರುವ ವೆಂಟಿಲೇಟರ್​ ಉತ್ಪಾದನೆ ಹಂತಕ್ಕೆ ಹೋಗುವಷ್ಟು ಅಂತಿಮ ರೂಪ ಪಡೆದಿಲ್ಲ. ಆದರೆ, ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಯತ್ನಿಸಲಾಗುತ್ತಿದೆ. ಇದರಿಂದ ಜನರಿಗೆ ನೆರವಾಗಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಟೆಸ್ಲಾ ಇಂಜಿನಿಯರ್​ ವಿಡಿಯೋದಲ್ಲಿ ತಿಳಿಸಿದ್ದಾರೆ.

ಟೆಸ್ಲಾ ಮುಖ್ಯಸ್ಥ ಏಲಾನ್​ ಮಸ್ಕ್​ ಇತ್ತೀಚೆಗೆ ಚೀನಾದಿಂದ 1000 ವೆಂಟಿಲೇಟರ್​ಗಳನ್ನು ತರಿಸಿ ಕ್ಯಾಲಿಫೋರ್ನಿಯಾದ ಆಸ್ಪತ್ರೆಗಳಿಗೆ ವಿತರಿಸಿದ್ದರು. ವಿದೇಶಗಳಲ್ಲಿ ಎಲ್ಲಿಯೇ ಹೆಚ್ಚುವರಿ ವೆಂಟಿಲೇಟರ್​ಗಳಿದ್ದರೂ ಅವುಗಳನ್ನು ಟೆಸ್ಲಾ ವಿತರಕರ ಮೂಲಕ ಪೂರೈಸಲಾಗುವುದು ಎಂದು ಮಸ್ಕ್​ ಘೋಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net