ಕಪಿಲ್ ಶರ್ಮಾ ಕೆಫೆ ಮೇಲೆ ಉಗ್ರರ ದಾಳಿ! ಗುಂಡು ಹಾರಿಸಲು ಅದೊಂದು ಟೀಕೆಯೇ ಕಾರಣ | Kapil Sharma Cafe

ವಿಜಯವಾಣಿ (36)
Published on

Kapil Sharma Cafe: ಇತ್ತೀಚೆಗಷ್ಟೇ ಕೆನಡಾದಲ್ಲಿರುವ ಬಾಲಿವುಡ್​ನ ಹಾಸ್ಯನಟ ಕಪಿಲ್ ಶರ್ಮಾ ಮಾಲೀಕತ್ವದ ಕೆಫೆಯ ಮೇಲೆ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದರು. ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ಸಂಭವಿಸಿದ್ದು, ಕಪಿಲ್​ ಸೇರಿದಂತೆ ಸ್ಥಳೀಯರಲ್ಲಿ ತೀವ್ರ ಆತಂಕ ಕಾಡಿದೆ. ಹರ್ಜಿತ್ ಸಿಂಗ್ ಲಡ್ಡಿ ನೇತೃತ್ವದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್ ಕೆಫೆಯನ್ನು ಗುರಿಯಾಗಿಸಿಕೊಂಡ ಖಲಿಸ್ತಾನಿ ಉಗ್ರರು, ರೆಸ್ಟೋರೆಂಟ್​ ಮೇಲೆ 9 ಸುತ್ತು ಗುಂಡಿನ ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ಲಡ್ಡಿ ಎನ್​ಐಎಯ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸಲಿಗೆ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಕಪಿಲ್​ಗೂ ಕೆನಡಾದಲ್ಲಿರುವ ಅವರ ಕೆಫೆ ಮೇಲಿ ದಾಳಿಗೂ ಯಾವ ರೀತಿಯ ಸಂಬಂಧ? ಇದರ ಹಿಂದಿರುವ ಕಾರಣವೇನು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರಲಿಲ್ಲ. ಆದರೀಗ ಅದಕ್ಕೆ ಉತ್ತರ ಸಿಕ್ಕಿದೆ.

ವಿವಾದಾತ್ಮಕ ಹೇಳಿಕೆ!

ಕೆಫೆ ಮೇಲಿನ ಗುಂಡಿನ ದಾಳಿಗೆ ಅಂದು ದಿ ಕಪಿಲ್ ಶರ್ಮ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ನೀಡಿದ್ದ ಆ ಒಂದು ಹೇಳಿಕೆಯೇ ಕಾರಣ. ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ನಿಹಾಂಗ್ ಸಿಖ್ಖರ ಸಾಂಪ್ರದಾಯಿಕ ವೇಷಭೂಷಣ ಮತ್ತು ನಡವಳಿಕೆಯ ಬಗ್ಗೆ ವ್ಯಂಗ್ಯವಾಡಿದ್ದರು. ಇದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನಿಷೇಧಿತ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಜೊತೆ ನಂಟು ಹೊಂದಿರುವ ಹರ್ಜಿತ್ ಸಿಂಗ್ ಲಡ್ಡಿ ಹೇಳಿದ್ದಾನೆ.

"ನಿಹಾಂಗ್ ಸಿಖ್​ರ ಬಗ್ಗೆ ಆಡಲಾದ ಮಾತುಗಳು ಆಕ್ರಮಣಕಾರಿ ಮತ್ತು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟುಮಾಡಿವೆ. ಹಾಸ್ಯದ ನೆಪದಲ್ಲಿ ಯಾವುದೇ ಧರ್ಮ ಅಥವಾ ಆಧ್ಯಾತ್ಮಿಕ ಗುರುತನ್ನು ಅಪಹಾಸ್ಯ ಮಾಡಬಾರದು. ಸಮುದಾಯವು ಕಪಿಲ್​ಗೆ ಅವರ ಮ್ಯಾನೇಜರ್​ಗೆ ಹಲವು ಬಾರಿ ದೂರವಾಣಿ ಕರೆ ಮಾಡಿ, ಕ್ಷಮೆಯಾಚಿಸುವಂತೆ ಹೇಳಲು ಪ್ರಯತ್ನಿಸಿದ್ದರು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಖುದ್ದಾಗಿ ಕಪಿಲ್ ಶರ್ಮಾ ಕೂಡ ಸಾರ್ವಜನಿಕವಾಗಿ ಕ್ಷಮೆಯಾಚಿಸಲಿಲ್ಲ. ಏಕೆ?" ಎಂದು ಖಲಿಸ್ತಾನಿ ಭಯೋತ್ಪಾದಕ ಪ್ರಶ್ನಿಸಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net