

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತೀಯರಾದ ಎಲ್ಲರೂ ಖಂಡಿಸಲೇಬೇಕು. ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.
ಕಾಶ್ಮೀರದಲ್ಲಿ ಉಗ್ರರ ದಾಳಿ ಸಂಬಂಧ ಕೇಂದ್ರ ಸರ್ಕಾರದ ಮಹತ್ವದ ಸಂಪುಟ ಸಭೆ ಕುರಿತು ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆ ಮಾಡಬೇಕಾ, ಬೇಡವಾ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಸಂಪುಟ ಸಭೆ ಕರೆದಿದೆ. ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಭಾರತೀಯತೆ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಲೇಬೇಕು. ಉಗ್ರರ ಅಟ್ಟಹಾಸ ಮಟ್ಟಹಾಕಲೇಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಬೆಂಬಲ ಇದ್ದೇ ಇರುತ್ತದೆ. ಒಳ್ಳೆಯ ನಿರ್ಧಾರಗಳನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುವ ವಿಶ್ವಾಸ ಇದೆ. ಅಗತ್ಯವಿದ್ದರೆ ಯುದ್ಧವನ್ನೂ ಘೋಷಣೆ ಮಾಡಲಿ ಎಂದರು.
ಬೆಳಗಾವಿ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ ವಿಚಾರವಾಗಿ ಮಾತನಾಡಿ, ಇದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ಮಾಧ್ಯಮಗಳು ತಪ್ಪಾಗಿ ತಿರುಚಿವೆ. ಸಿಎಂ ಅವರು ಯಾವುದೇ ರೀತಿಯಲ್ಲೂ ಅನುಚಿತವಾಗಿ ನಡೆದುಕೊಂಡಿಲ್ಲ. ಸಹಜವಾಗಿ ಒಂದು ಶಿಷ್ಟಾಚಾರ ವಿಚಾರದಲ್ಲಿ ಸೂಕ್ತ ಭದ್ರತಾ ನಿಯೋಜನೆ ಮಾಡದೇ ಸಮಾವೇಶದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಸಮಾವೇಶಕ್ಕೆ ಅಡ್ಡಿಪಡಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಿದರು. ಅದಕ್ಕೆ ಸಹಜವಾಗಿ ಪೊಲೀಸ್ ಭದ್ರತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೈ ತೋರಿಸಿ ಪೊಲೀಸ್ ಅಧಿಕಾರಿ ಮೇಲೆ ಸಿಟ್ಟು ತೋರಿಸಿದ್ದಾರೆ. ಆದರೆ, ಕೆಲವು ಮಾಧ್ಯಮಗಳು ಅದನ್ನೇ ತಪ್ಪಾಗಿ ತೋರಿಸಿದ್ದಾರೆ. ಆ ಜಾಗದಲ್ಲಿ ಯಾರೇ ಇದ್ದರೂ ಅದನ್ನೇ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ನಡೆ ಸಮರ್ಥಿಸಿಕೊಂಡರು.