

ಬೆಂಗಳೂರು/ನವದೆಹಲಿ: ಕರ್ನಾಟಕ, ತಮಿಳುನಾಡು ಸೇರಿ ದೇಶದ ವಿವಿಧೆಡೆ ನಾಲ್ಕೈದು ದಿನಗಳಿಂದ ಸೆರೆಸಿಕ್ಕಿರುವ ಶಂಕಿತ ಉಗ್ರರು ದೆಹಲಿ, ಗುಜರಾತ್ ಸೇರಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಜ.26ರ ಗಣರಾಜ್ಯೋತ್ಸವ ವೇಳೆ ಭಾರಿ ಪ್ರಮಾಣದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದರೆಂಬ ಆಘಾತಕಾರಿ ಸಂಗತಿ ತನಿಖಾ ತಂಡಗಳ ವಿಚಾರಣೆ ವೇಳೆ ಬಯಲಿಗೆ ಬಂದಿದೆ.
ಸಿಸಿಬಿ ಪೊಲೀಸರು ಎಫ್ಐಆರ್ನಲ್ಲಿ ಉಲ್ಲೇಖಿಸಿರುವಂತೆ ಐಸಿಸ್ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಕರ್ನಾಟಕದ 11 ಶಂಕಿತ ಉಗ್ರರ ಪೈಕಿ 8 ಶಂಕಿತರ ಸುಳಿವು ಸಿಕ್ಕಿಲ್ಲ. ಬೆಂಗಳೂರು, ಕೋಲಾರ, ಶಿವಮೊಗ್ಗ, ಚಾಮರಾಜನಗರ, ರಾಮನಗರ, ಮೈಸೂರು ಮೂಲದವರನ್ನು ಶಂಕಿತರು ಎಂದು ಸಿಸಿಬಿ ಗುರುತಿಸಿದೆ. ಸದ್ಯ ಮೂವರನ್ನು ಮಾತ್ರ ಬಂಧಿಸಲಾಗಿದೆ. ಉಳಿದವರ ವಿವರ ಸಿಗದಿರುವುದು ಭೀತಿ ಸೃಷ್ಟಿಸಿದೆ.
2019ರ ಡಿಸೆಂಬರ್ನಲ್ಲಿ ತಮಿಳುನಾಡಿನ ‘ಹಿಂದು ಮಕ್ಕಳ ಕಚ್ಚಿ’ ಸಂಘಟನೆಯ ಕೆ.ಸಿ. ಸುರೇಶ್ ಅವರನ್ನು ಹತ್ಯೆ ಮಾಡಿದ್ದ ಐಸಿಸ್ನ 6 ಶಂಕಿತರ ತಂಡ ನೇಪಾಳಕ್ಕೆ ಹೋಗಿ, ನಂತರ ಪುನಃ ಭಾರತ ಪ್ರವೇಶಿಸಿತ್ತು. ಜ.9ರಂದು ದೆಹಲಿಯಲ್ಲಿ ಪ್ರಮುಖ ಆರೋಪಿ ಮೊಯ್ದೀನ್ ಕ್ವಾಜಾ ಸೇರಿ ಮೂವರನ್ನು ಗುಂಡು ಹಾರಿಸಿ ಬಂಧಿಸಲಾಗಿತ್ತು. ಇದಾದ ಬಳಿಕ ಗುಜರಾತ್ನಲ್ಲಿ ಮತ್ತೊಬ್ಬ ಆರೋಪಿ ಸಿಕ್ಕಿಬಿದ್ದಿದ್ದ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಭೂಗತವಾಗಿರುವ ಶಂಕಿತ ಉಗ್ರರೇ ದುಷ್ಕೃತ್ಯ ಎಸಗುವ ಸಾಧ್ಯತೆ ಇದೆಯೆಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.
ಸ್ನೇಹಿತರ ಬಳಕೆ!: ಐಸಿಸ್ನ ಶಂಕಿತ ಉಗ್ರ ಬೆಂಗಳೂರಿನ ಮೆಹಬೂಬ್ ಪಾಷಾ ತನ್ನ ಸಂಬಂಧಿಕರು ಮತ್ತು ಸ್ನೇಹಿತರಾದ ಇಮ್ರಾನ್ ಖಾನ್, ಹನೀಶ್, ಮನ್ಸೂರ್, ಸಲೀಂ, ಮತೀನ್, ಶಾಜಿಬ್ ಜಬೀವುಲ್ಲಾ ಸೇರಿ ಮುಂತಾದವರನ್ನು ಸಂಘಟಿಸಿದ್ದ. ‘ನಮ್ಮ ಧರ್ಮಕ್ಕೆ ಅನ್ಯಾಯವಾಗುತ್ತಿದೆ. ಅದರ ವಿರುದ್ಧ ಹೋರಾಟಕ್ಕೆ ಸೂಕ್ತ ಕಾಲ ಒದಗಿ ಬಂದಿದೆ...’ ಹೀಗೆ ಧಾರ್ವಿುಕ, ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡೇ ಸಂಚು ರೂಪಿಸಿದ್ದ.
ಬೆಂಗಳೂರು ನಗರ ಮತ್ತು ಹೊರವಲಯದ ಪ್ರದೇಶ ಗಳನ್ನೇ ಉಗ್ರರು ಅಡಗು ತಾಣ ಮಾಡಿಕೊಂಡಿದ್ದಾರೆ. 2014ರಿಂದ 2018ರ ಅವಧಿಯಲ್ಲಿ 20ಕ್ಕೂ ಹೆಚ್ಚು ಉಗ್ರರ ಸಭೆ ನಡೆದಿವೆ ಎಂಬುದನ್ನು ಅಕ್ಟೋಬರ್ನಲ್ಲಿ ಎನ್ಐಎ ನಡೆಸಿದ ರಾಷ್ಟ್ರೀಯ ಸಭೆಯಲ್ಲಿ ಬಹಿರಂಗಪಡಿಸಿತ್ತು.
ಗುಪ್ತದಳದಿಂದ ಕಟ್ಟೆಚ್ಚರ
ದಕ್ಷಿಣ ಭಾರತದ ಪ್ರಮುಖ ನಗರಗಳು ಉಗ್ರರ ಟಾರ್ಗೆಟ್ ಆಗಿದ್ದವು ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಗುಪ್ತದಳ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ. ಶಂಕಿತ ಉಗ್ರರ ಪಟ್ಟಿಯಲ್ಲಿ ಕರ್ನಾಟಕದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದ ಗಡಿಭಾಗ ಜಿಲ್ಲೆಗಳಲ್ಲಿ ಹಾಗೂ ಕಾಡು ಪ್ರದೇಶಗಳ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸುವಂತೆ ಎಚ್ಚರಿಕೆ ನೀಡಿದೆ.
ನೇಮಕಾತಿ ಶಿಬಿರ ಟಾರ್ಗೆಟ್!
ಗಣರಾಜ್ಯೋತ್ಸವ ಸಂದರ್ಭದಲ್ಲೇ ದುಷ್ಕೃತ್ಯ ಎಸಗಬೇಕು ಎಂಬುದನ್ನು ಲೆಕ್ಕಚಾರ ಮಾಡಿಕೊಂಡಿದ್ದರು. ಹಿಂದುಪರ ಸಂಘಟನೆಗಳ ಪ್ರಮುಖ ಮುಖಂಡರು ಹಾಗೂ ಆರ್ಎಸ್ಎಸ್ ಮುಖಂಡರ ಹತ್ಯೆಗೈಯಲೂ ಯೋಜನೆ ರೂಪಿಸಿದ್ದಾರೆ. ಪೊಲೀಸ್ ಮತ್ತು ಸೈನಿಕರ ನೇಮಕಾತಿ ಶಿಬಿರಗಳ ಮೇಲೂ ದಾಳಿ ನಡೆಸುವುದು ಗುರಿಯಾಗಿಸಿಕೊಂಡಿದ್ದರು ಎಂದು ಶಂಕಿತರು ವಿಚಾರಣೆ ವೇಳೆ ಬಹಿರಂಗ ಪಡಿಸಿರುವುದಾಗಿ ಎನ್ಐಎ ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡ ಶಂಕಿತರು
ಗುರುಪ್ಪನಪಾಳ್ಯ-ಮಹಮದ್ ಮನ್ಸೂರ್, ಕೋಲಾರ-ಸಲೀಂ ಖಾನ್, ಶಿವಮೊಗ್ಗ-ಅಬ್ದುಲ್ ಮತೀನ್ ಅಹಮ್ಮದ್ ತಹಾ, ಬೆಂಗಳೂರು-ಹುಸೇನ್, ಮೈಸೂರಿನ ಚನ್ನಪಟ್ಟಣ-ಅನೀಸ್, ರಾಮನಗರ-ಅಜಾಜ್ ಪಾಷಾ, ಬೆಂಗಳೂರು-ಝುಬೀವುಲ್ಲಾ, ಶಿವಮೊಗ್ಗ-ಮುಸಾವೀರ್ ಹುಸೇನ್ ಶಾಝೀಬ್.