ಉಗ್ರ ಬಲೆಗೆ ಸಿಗ್ನಲ್ ಜಾಡು: ಬೇನಾಮಿ ನಂಬರ್​ನಿಂದ ಜಮ್ಮು-ಕಾಶ್ಮೀರದ ಸಂಬಂಧಿಕರ ಸಂಪರ್ಕ

Terrorist
Published on

ಬೆಂಗಳೂರು: ಬೆೆಂಗಳೂರಿನಲ್ಲಿ ಸೋಮವಾರ ಬಂಧಿತನಾಗಿರುವ, ಕೇಂದ್ರ ಭದ್ರತಾ ಪಡೆಗಳ ಹಿಟ್​ಲಿಸ್ಟ್​ನಲ್ಲಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಕುಳಿತು ಬೇರೆಯವರ ಹೆಸರಿನಲ್ಲಿರುವ ಮೊಬೈಲ್ ನಂಬರ್ ಬಳಸುತ್ತಾ ಜಮ್ಮು- ಕಾಶ್ಮೀರದಲ್ಲಿರುವ ಸಂಬಂಧಿಕರೊಂದಿಗೆ ಸಂಭಾಷಣೆ ನಡೆಸುತ್ತಿದ್ದ. ಇದೇ ಆತನಿಗೆ ಮುಳುವಾಯಿತು. ತಾಲೀಬ್ ಮೊಬೈಲ್ ಮೂಲಕ ನಿರಂತರವಾಗಿ ಕಾಶ್ಮೀರದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ಪಡೆದ ಜಮ್ಮು- ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆ ಮೊಬೈಲ್ ಸಿಗ್ನಲ್ ಜಾಡು ಹಿಡಿದು ಬೆಂಗಳೂರಿಗೆ ಆಗಮಿಸಿ ಗಾಂಧಿನಗರದ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿ ತಾಲಿಬ್ ಹುಸೇನ್ ಬೆನ್ನತ್ತಿದ್ದರು. ಫೋಟೋ ಹಿಡಿದು ಜಾಲಾಡಿ ಉಗ್ರನನ್ನು ಗುರುತಿಸಿ ಚಲನವಲನದ ಮಾಹಿತಿ ಸಂಗ್ರಹಿಸಿ ಕರ್ನಾಟಕ ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಇತ್ತ ಮೇಲಧಿಕಾರಿಯಿಂದ ಸೂಚನೆ ಬರುತ್ತಿದಂತೆ ಎಚ್ಚೆತ್ತ ಶ್ರೀರಾಂಪುರ ಪೊಲೀಸರು, ಫೀಲ್ಡ್​ಗೆ ಇಳಿದು ತಾಲಿಬ್ ಹುಸೇನ್ ಫೋಟೋ ಸ್ಥಳೀಯರಿಗೆ ತೋರಿಸಿ ಎಲ್ಲಿದ್ದಾನೆ? ಯಾರ ಸಂಪರ್ಕದಲ್ಲಿ ಇದ್ದಾನೆ? ಆಶ್ರಯ ಕೊಟ್ಟವರು ಯಾರು? ಎಂದೆಲ್ಲ ಮಾಹಿತಿ ಸಂಗ್ರಹಿಸಿದ್ದರು.

ಬೇರೆಯವರ ಹೆಸರಿನ ಸಿಮ್: ಕೇಂದ್ರ ಭದ್ರತಾ ಪಡೆಗಳ ಹಿಟ್​ಲಿಸ್ಟ್​ನಲ್ಲಿದ್ದ ತಾಲಿಬ್ ಹುಸೇನ್, ಬೆಂಗಳೂರಿಗೆ ಬಂದ ಮೇಲೆ ಯಾವುದೇ ಗುರುತಿನ ಚೀಟಿ ಬಳಸುತ್ತಿರಲಿಲ್ಲ. ಪತ್ನಿಗೆ 3ನೇ ಮಗು ಆಗುವ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ಮಾಡಿಸಬೇಕೆಂದು ಸುಳ್ಳು ಹೇಳಿ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದ. ಅದೇ ಮೊಬೈಲ್ ನಂಬರ್ ಬಳಸಿ ಜಮ್ಮು-ಕಾಶ್ಮೀರದ ವಿಳಾಸ ಕೊಟ್ಟು 2021ರಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾನೆ.

ಹಿಜ್ಬುಲ್ ಮುಜಾಹಿದ್ದೀನ್ ಉಗ್ರನನ್ನು ಜಮ್ಮು-ಕಾಶ್ಮೀರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿರಂತರ ನಿಗಾಯಿರುತ್ತದೆ. ಜಮ್ಮು-ಕಾಶ್ಮೀರ ಪೊಲೀಸರ ತನಿಖೆಗೆ ಅಗತ್ಯ ಸಹಕಾರ ನೀಡಲಾಗುವುದು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಜಮ್ಮು-ಕಾಶ್ಮೀರದ ನಿವಾಸಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ರಾಜ್ಯದ ಪೊಲೀಸರೂ ಈ ಕುರಿತು ತನಿಖೆ ಆರಂಭಿಸಿದ್ದಾರೆ. ಶಂಕಿತ ಉಗ್ರನಿಗೆ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ಮೊಬೈಲ್ ಸಿಮ್ ಹಾಗೂ ಕೆಲವು ದಾಖಲೆಗಳನ್ನು ಪಡೆಯಲು ಸ್ಥಳೀಯರೂ ಸಹಾಯ ಮಾಡಿದ್ದಾರೆ. ಈ ದಿಸೆಯಲ್ಲೂ ತನಿಖೆ ನಡೆಯುತ್ತಿದೆ. | ಆರಗ ಜ್ಞಾನೇಂದ್ರ ಗೃಹ ಸಚಿವ

ಪತ್ನಿ ಪೊಲೀಸ್ ಅಧಿಕಾರಿ ಸಹೋದರಿ?: ತಾಲಿಬ್ ಹುಸೇನ್, ಎರಡು ಮದುವೆಯಾಗಿದ್ದ. ಮೊದಲ ಪತ್ನಿಯನ್ನು ಕಾಶ್ಮೀರದಲ್ಲಿಯೇ ಬಿಟ್ಟು 2ನೇ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ. 2ನೇ ಪತ್ನಿ ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿ ಸಹೋದರಿಯಾಗಿದ್ದು, ಮೊದಲ ಗಂಡನ ಬಿಟ್ಟು ತಾಲಿಬ್ ಜತೆಗೆ ಬಂದಿದ್ದಳು. ಮೊದಲ ಪತಿಗೆ ಇಬ್ಬರು ಮಕ್ಕಳು ಇದ್ದಾರೆ. ತಾಲಿಬ್ ಜತೆಗೆ ಬೆಂಗಳೂರಿಗೆ ಬಂದ ಮೇಲೆ 3ನೇ ಮಗು ಜನಿಸಿತ್ತು. ತಾಲಿಬ್ ಬಂಧನ ವಿಷಯ ತಿಳಿದ ಸ್ಥಳೀಯ ಮುಖಂಡರು ಆತನ ಪತ್ನಿ ಮತ್ತು ಮಕ್ಕಳು ಜಮ್ಮು-ಕಾಶ್ಮೀರಕ್ಕೆ ಹೋಗಲು ವಿಮಾನ ಟಿಕೇಟ್ ಬುಕ್ ಮಾಡಿಕೊಟ್ಟು ಎರಡು ದಿನಗಳ ಹಿಂದೆ ಕಳುಹಿಸಿದ್ದಾರೆ. ಇದೀಗ ತಾಲಿಬ್ ಕುಟುಂಬ ಜಮ್ಮು-ಕಾಶ್ಮೀರ ಸೇರಿದೆ.

ಜೆಕೆ ಪೊಲೀಸರೊಂದಿಗೆ ಸಂಪರ್ಕ: ಶ್ರೀರಾಂಪುರದಲ್ಲಿ ಉಗ್ರ ತಾಲಿಬ್ ಹುಸೇನ್ ಬಂಧನ ಸಂಬಂಧ ಜಮ್ಮು-ಕಾಶ್ಮೀರ ಪೊಲೀಸರು ಯಾವ ಮಾಹಿತಿ ಕೊಡಬೇಕೋ ಆ ಎಲ್ಲ ಮಾಹಿತಿ ನೀಡಿದ್ದಾರೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೆವೆ. ಉಗ್ರನ ವಿಚಾರಣೆ ಮತ್ತು ತನಿಖೆ ಮುಗಿದ ಮೇಲೆ ಹೆಚ್ಚಿನ ಮಾಹಿತಿಯನ್ನು ಜಮ್ಮು-ಕಾಶ್ಮೀರ ಪೊಲೀಸರು ನಮಗೆ ನೀಡಲಿದ್ದಾರೆ. ಅದಕ್ಕೂ ಮೊದಲು ನಾವು ಅವರನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಸ್ಥಳೀಯವಾಗಿ ಯಾರು ತಾಲಿಬ್​ಗೆ ಸಹಾಯ ಮಾಡಿದ್ದರು. ಅವರ ಪಾತ್ರ ಏನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಹೇಬಿಯಸ್ ನೆಪದಲ್ಲಿ ಸೆರೆ: ಮೇ 29ರ ರಾತ್ರಿ 9.30ಕ್ಕೆ ತಾಲಿಬ್ ಕೆಲಸ ಮುಗಿಸಿ ಮನೆಗೆ ಬರುತ್ತಿದಂತೆ ವಶಕ್ಕೆ ಪಡೆದು ಠಾಣೆಗೆ ಕರೆತಂದರು. ವಿಷಯ ತಿಳಿದ ಆಪ್ತರು, ಸ್ನೇಹಿತರು ಠಾಣೆಗೆ ಬಂದು ಪ್ರಶ್ನಿಸಿದ್ದಾಗ ಶ್ರೀರಾಂಪುರ ಪೊಲೀಸರು ‘ತಾಲಿಬ್ ಹುಸೇನ್ ವಿರುದ್ಧ ಮೊದಲ ಪತ್ನಿ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ತಾಲಿಬ್​ನನ್ನು ಜಮ್ಮು-ಕಾಶ್ಮೀರಕ್ಕೆ ಕರೆದುಕೊಂಡು ಹೋಗಿ ಕೋರ್ಟ್​ಗೆ ಹಾಜರುಪಡಿಸಬೇಕಿದೆ. ಇಲ್ಲವಾದರೆ, ಪೊಲೀಸರ ಮೇಲೆ ಕೋರ್ಟ್ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಮಜಾಯಿಸಿ ಕೊಟ್ಟು ಕಳುಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net