

ಉತ್ತರ ಪ್ರದೇಶ: ದೆಹಲಿಯಿಂದ ಆಗ್ರಾಕ್ಕೆ ಸಂಪರ್ಕಿಸುವ 165 ಕಿಲೋಮೀಟರ್ ಉದ್ದದ ಯಮುನಾ ಷಟ್ಪಥ ಹೆದ್ದಾರಿಯ ಮಥುರಾ ಜಿಲ್ಲೆಯ ಗಡಿ ಭಾಗದಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುವ ಹಲವು ಸರಣಿ ಪ್ರಕರಣಗಳು ಇತ್ತಿಚೆಗೆ ಬೆಳಕಿಗೆ ಬಂದಿದ್ದವು.
ಇದನ್ನು ತಡೆಗಟ್ಟಿ ದರೋಡೆಕೋರರ ಮೇಲೆ ಕಣ್ಣಿಟ್ಟಿರುವ ಖಾಕಿ ಪಡೆಯು ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ವಿನೂತನವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇ ಸುತ್ತಲಿನ ಮರಗಳನ್ನು ಹತ್ತಿ ಪೊಲೀಸರು, ರಾತ್ರಿ ವೇಳೆ ರಸ್ತೆಬದಿಯಲ್ಲಿ ಟಾರ್ಚ್‌ಗಳ ಸಹಾಯದಿಂದ ಸುತ್ತಲಿನ ಪ್ರದೇಶಗಳ ಮೇಲೆ ನಿಗಾ ಇಡುತ್ತಿದ್ದಾರೆ.
ಮಥುರಾ ಪೊಲೀಸರು ಮರಗಳನ್ನು ಹತ್ತಿ, ಎಲೆಗಳ ನಡುವೆ ಅಡಗಿಕೊಂಡು ದರೋಡೆಕೋರರ ಸುಳಿವುಗಳಿಗಾಗಿ ಹುಡುಕುತ್ತಿದ್ದಾರೆ. ಮೇ 29 ಮತ್ತು ಜೂನ್ 2ರ ರಾತ್ರಿ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಸರಣಿ ಲೂಟಿ ಘಟನೆಗಳ ನಂತರ ಪೊಲೀಸರು ಈ ಕ್ರಮವನ್ನು ಪ್ರಾರಂಭಿಸಿದ್ದಾರೆ.
ಮೊದಲಿಗೆ ವಾಹನಗಳ ಮೇಲೆ ಕಲ್ಲೆಸೆಯುತ್ತಿದ್ದ ದರೋಡೆಕೋರರು, ವಾಹನ ನಿಲ್ಲುತ್ತಿದ್ದಂತೆ ಸವಾರರನ್ನು ದರೋಡೆ ಮಾಡಿ ಪರಾರಿಯಾಗುತ್ತಿದ್ದರು. ಆದರೆ ಎರಡು ದರೋಡೆ ವಿಫಲವಾಗಿದ್ದವು. ಈ ಕುರಿತು ಯಾವಾಗ ದೂರು ನೀಡಲಾಯಿತೋ ಆಗ ಯುಪಿ ಪೊಲೀಸರು ದರೋಡೆ ಮಾಡುವ ರೀತಿಯನ್ನ ಕೇಳಿ ಬೆಚ್ಚಿ ಬಿದ್ದಿದ್ದರು.
ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಕ್ರಿಮಿನಲ್‌ಗಳನ್ನು ಹತ್ತಿಕ್ಕುವ ಸಲುವಾಗಿ ದರೋಡೆಕೋರರ ಪತ್ತೆಗೆ ತಂಡ ರಚಿಸಿ, ಪೊಲೀಸರನ್ನು ಎಕ್ಸ್‌ಪ್ರೆಸ್‌ವೇ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಿದೆ. ಅಲ್ಲದೆ, ವಾಹನಗಳ ತಪಾಸಣೆ ಮಾಡುತ್ತಿದ್ದು ಅನುಮಾನಾಸ್ಪದ ವ್ಯಕ್ತಿಗಳ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.(ಏಜೆನ್ಸೀಸ್)