

ಮಂಗಳೂರು: ಶ್ರೀಲಂಕಾದ 13 ಶಂಕಿತ ಉಗ್ರರ ತಂಡ ಕೇರಳ ಪ್ರವೇಶಿಸಿರುವ ಕುರಿತು ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯಲ್ಲೂ ಹೈಅಲರ್ಟ್ ಘೋಷಿಸಲಾಗಿದೆ. ಇವರು ಲಂಕಾದ ಮನ್ನಾರ್ ಎಂಬಲ್ಲಿಂದ ಮೂರು ಪ್ರತ್ಯೇಕ ಗುಂಪುಗಳಲ್ಲಿ ಕೆಲದಿನಗಳ ಹಿಂದೆ ಅಕ್ರಮವಾಗಿ ಯಾಂತ್ರೀಕೃತ ದೋಣಿಗಳ ಮೂಲಕ ತಮಿಳುನಾಡಿನ ಕಡಲ ತೀರಗಳಿಗೆ ಬಂದು ತಲುಪಿದ್ದಾರೆ. ಅಲ್ಲಿಂದ ಕೇರಳದ ಕೊಚ್ಚಿನ್ಗೆ ರಸ್ತೆ ಮೂಲಕ ಬಂದಿದ್ದು, ಕೇರಳ ಅಥವಾ ಕರ್ನಾಟಕದ ಕರಾವಳಿ ಮೂಲಕ ಪಾಕಿಸ್ತಾನಕ್ಕೆ ಹೋಗಬಹುದೆಂದು ಗುಪ್ತಚರ ದಳ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾ ಇಡಲಾಗಿದೆ.
ಪಾಕ್ ಬೋಟ್ ರೆಡಿ: ಲಂಕಾದ ಈ ಎಲ್ಲ 13 ಮಂದಿ, ಉಗ್ರ ಸಂಘಟನೆ ಐಸಿಸ್ನಿಂದ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳುವ ಯೋಜನೆ ಸಿದ್ಧಗೊಂಡಿದೆ. ಶಂಕಿತ ಉಗ್ರರು ಕೇರಳ ಅಥವಾ ಕರ್ನಾಟಕದ ಸಮುದ್ರದ ಮೂಲಕ ಬೋಟ್ಗಳಲ್ಲಿ ತೆರಳುವ ಸಾಧ್ಯತೆ ಇದೆ. ಅವರನ್ನು ಸಮುದ್ರ ಮಧ್ಯದಿಂದ ಪಾಕಿಸ್ತಾನಕ್ಕೆ ಕರೆದೊಯ್ಯಲು ಪಾಕಿಸ್ತಾನದ ಬೋಟ್ ಅಂತಾರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ಕಾಯುತ್ತಿರುವ ಬಗ್ಗೆ ಕೂಡ ಗುಪ್ತಚರ ಮಾಹಿತಿ ಸಿಕ್ಕಿದೆ.
ಈ ಮೊದಲು ಸಹ ಇದೇ ರೀತಿ ತಮಿಳುನಾಡು, ಕೇರಳ, ಕರ್ನಾಟಕ ಮಾರ್ಗವಾಗಿ ಬೋಟ್ಗಳ ಮೂಲಕ ಪಾಕಿಸ್ತಾನಕ್ಕೆ ತೆರಳಿರುವ ಸಂಶಯ ವ್ಯಕ್ತವಾಗಿದೆ. ಹಿಂದೆ ಇಂಡಿಯನ್ ಮುಜಾಹಿದೀನ್ಸಂಘಟನೆಯ ಸ್ಲೀಪರ್ ಸೆಲ್ ಆಗಿದ್ದ ಮಂಗಳೂರಿನಲ್ಲಿ ಹಲವರನ್ನು ಬಂಧಿಸಲಾಗಿತ್ತು. ಕೇರಳ ಲಿಂಕ್ ಇರುವ ಮಂಗಳೂರಿನ ಕೆಲವರು ಐಸಿಸ್, ತಾಲಿಬಾನ್ ಮುಂತಾದ ಉಗ್ರ ಸಂಘಟನೆಗಳ ಪರ ಒಲವು ತೋರಿರುವುದು, ಅದಕ್ಕೆ ಪೂರಕವಾಗಿ ನೇಮಕಾತಿ, ಧನ ಸಂಗ್ರಹದಲ್ಲಿ ತೊಡಗಿರುವುದು ಇತ್ತೀಚೆಗಿನ ಬೆಳವಣಿಗೆ. ಇದರ ಭಾಗವಾಗಿಯೇ ಎನ್ಐಎ ಕೆಲ ದಿನಗಳ ಹಿಂದಷ್ಟೇ ಉಳ್ಳಾಲದಲ್ಲಿ ಮಾಜಿ ಶಾಸಕರೊಬ್ಬರ ಕುಟುಂಬದ ಯುವಕನನ್ನು ವಶಕ್ಕೆ ಪಡೆದುಕೊಂಡಿತ್ತು.
ಆಯುಕ್ತರಿಗೆ ಗೊತ್ತಿಲ್ಲ: ಸ್ಥಳೀಯ ಪೊಲೀಸರು, ತಟರಕ್ಷಣಾ ಪಡೆ ಅಧಿಕಾರಿಗಳು ಈ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ‘ನಮಗೆ ಯಾವುದೇ ಅಲರ್ಟ್ ಇಲ್ಲ’ ಎಂದಿದ್ದಾರೆ.
ಹಿಂದಿನ ಪ್ರಕರಣಕ್ಕಿಲ್ಲ ಲಿಂಕ್?: ಈ ಮೊದಲು ಜೂನ್ನಲ್ಲಿ ಮಂಗಳೂರಿನಲ್ಲಿ ಶ್ರೀಲಂಕಾದ 38 ಮಂದಿ ಪತ್ತೆಯಾಗಿದ್ದರು. ಲಂಕಾದ ಈ ನಿರ್ವಸಿತರನ್ನು ತಮಿಳುನಾಡು ಮೂಲಕ ಅಕ್ರಮವಾಗಿ ಸಾಗಣೆ ಮಾಡಿ, ಇಲ್ಲಿಂದ ಕೆನಡಾಕ್ಕೆ ತೆರಳುವ ಯೋಜನೆ ರೂಪಿಸಲಾಗಿತ್ತು. ಮಂಗಳೂರಿನಲ್ಲಿ ಪತ್ತೆಯಾದ ಇವರ ಮೂಲ ಕೆದಕಿದಾಗ ಅದರಲ್ಲಿ ಎಲ್ಟಿಟಿಇ ಸಖ್ಯವಿದ್ದವರೂ ಇದ್ದರು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಲಾಗಿತ್ತು. ಆದರೆ ಅದಕ್ಕೂ ಈಗಿನ ಪ್ರಕರಣಕ್ಕೂ ಲಿಂಕ್ ಇಲ್ಲ ಎನ್ನಲಾಗಿದೆ. ಈಗಿನ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ತರಬೇತಿಗೆ ಹೋಗುತ್ತಿರುವ ಸಾಧ್ಯತೆಯೇ ಹೆಚ್ಚು ಎಂದೂ ಮೂಲಗಳು ತಿಳಿಸಿವೆ.
ಸಮುದ್ರ ಮಾರ್ಗ ಉಗ್ರರಿಗೆ ವರದಾನವಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭದ್ರತೆಗೆ ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ಒತ್ತು ನೀಡುತ್ತಿದೆ. ಮುಂಬೈ ದಾಳಿಯ ಬಳಿಕ ಮಂಗಳೂರು ಹಾಗೂ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳು ಯಾವತ್ತಿಗೂ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ. ಐಸಿಸ್ ಸಹಿತ ಉಗ್ರ ಚಟುವಟಿಕೆ ಹೆಚ್ಚು ಕಂಡುಬರುತ್ತಿರುವ ಕೇರಳದ ಲಿಂಕ್ ಕರ್ನಾಟಕದ ಕರಾವಳಿ ರಿಸ್ಕ್ನಲ್ಲೇ ಇರುವುದನ್ನು ಸೂಚಿಸುತ್ತಿದೆ. ಇಂಥ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಂಗಳೂರು ಸಹಿತ ಭಾರತದ ವಿವಿಧೆಡೆಗಳಲ್ಲಿ ತಟರಕ್ಷಣಾ ಪಡೆ (ಕೋಸ್ಟ್ ಗಾರ್ಡ್) ನೆಲೆಯನ್ನು ಭದ್ರಗೊಳಿಸಲಾಗಿದೆ. ಅತ್ಯಾಧುನಿಕ ನೌಕೆಗಳು, ಗಸ್ತು ನಡೆಸಲು ಪೂರಕ ಸಲಕರಣೆಗಳನ್ನು ಒದಗಿಸಲಾಗಿದೆ. ಗುಪ್ತಚರ ಮಾಹಿತಿಗಳ ಮೂಲಕ ಉಗ್ರ ಚಟುವಟಿಕೆಗಳು ವರದಿಯಾದಾಗಲೆಲ್ಲ ಇಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗುತ್ತದೆ. ಕೋಸ್ಟ್ ಗಾರ್ಡ್ಗೆ ಪೂರಕವಾಗಿ ರಾಜ್ಯ ಸರ್ಕಾರವೂ ಕೋಸ್ಟಲ್ ಪೊಲೀಸ್ (ಕರಾವಳಿ ಕಾವಲು ಪೊಲೀಸ್) ಪ್ರಾರಂಭಿಸಿದೆ. ಸಾಗರ ಕೇಂದ್ರಿತವಾಗಿ ಉಗ್ರರ ಚಲನವಲನದ ಮೇಲೆ ನಿಗಾ ಇರಿಸುವುದು ಪ್ರಮುಖ ಉದ್ದೇಶ.
ಸ್ಪೋಟಕ ಸಾಗಾಟ: 2005ರಿಂದೀಚೆಗಿನ ಹಲವು ಸರಣಿ ಬಾಂಬ್ ಸ್ಪೋಟಗಳಿಗೆ ಅಮೋನಿಯಂ ನೈಟ್ರೇಟ್ನಂತಹ ಸ್ಪೋಟಕ ಸಾಗಣೆಯಲ್ಲಿ ಮಂಗಳೂರು ಹೆಸರು ತಳಕು ಹಾಕಿಕೊಂಡಿತ್ತು. ಆ ಬಳಿಕ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿ ಹಲವರ ಬಂಧನವೂ ಆಗಿದೆ. ನೇರವಾಗಿ ಹಾಗೂ ಪರೋಕ್ಷವಾಗಿ ರಾಜ್ಯದ ಕರಾವಳಿಯ ಹೆಸರು ಉಗ್ರ ಚಟುವಟಿಕೆಯಲ್ಲಿ ಕೇಳಿಬರುತ್ತಲೇ ಇದೆ. ಇದು ಮಂಗಳೂರಿನಿಂದ ಭಟ್ಕಳದವರೆಗೂ ವ್ಯಾಪಿಸಿದೆ.
ಮತ್ತೊಂದು ತಂಡ ವಾಪಸ್: ಈಗಾಗಲೇ ಇದೇ ರೀತಿ ಪಾಕಿಸ್ತಾನಕ್ಕೆ ತೆರಳಿದ್ದ ಗುಂಪೊಂದು ಇದೇ ಮಾರ್ಗದಲ್ಲಿ ಹಿಂದಕ್ಕೆ ಬರುತ್ತಿರುವ ಬಗ್ಗೆಯೂ ಗುಪ್ತಚರ ಮಾಹಿತಿ ಇದೆ. ಉಗ್ರರ ಚಲನವಲನ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್, ಭಾರತೀಯ ತಟರಕ್ಷಣಾ ಪಡೆಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಬೋಟ್ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮೀನುಗಾರರಿಗೂ ತಿಳಿಸಲಾಗಿದೆ. ಕಡಲ ಕಿನಾರೆ ಬಳಿ ಇರುವ ವಸತಿಗೃಹ, ರೆಸಾರ್ಟ್ ಗಳ ಮೇಲೆ ನಿಗಾ ಇಡಲು, ಅಗತ್ಯ ಬಿದ್ದರೆ ಶೋಧ ನಡೆಸಲು ಸೂಚನೆ ಬಂದಿದೆ. ತಮಿಳುನಾಡು ನಿವಾಸಿಗಳೆಂದು ತಮ್ಮ ಗುರುತನ್ನು ಮರೆಮಾಚಿ ಬೇರೆ ಬೇರೆ ರೀತಿಯಲ್ಲಿ ಪ್ರಯಾಣಕ್ಕೆ ಸಿದ್ಧತೆ ನಡೆಸಿರಬಹುದಾದ ಶಂಕೆ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಲು ನಿರ್ದೇಶನ ನೀಡಲಾಗಿದೆ.