ಐಪಿಎಲ್​ಗೆ ಟೆರರ್ ಅಲರ್ಟ್!; ಟೂರ್ನಿ ಆರಂಭಕ್ಕೆ 2 ದಿನ ಮೊದಲೇ ಆತಂಕದ ಕಾಮೋಡ

asdasdsgdfg
Published on

ಮುಂಬೈ: ಮಹಾರಾಷ್ಟ್ರದಲ್ಲಿ ನಿಗದಿಯಾಗಿರುವ ಐಪಿಎಲ್ 15ನೇ ಆವೃತ್ತಿ ಆರಂಭಕ್ಕೆ ಎರಡು ದಿನವಿರುವಂತೆಯೇ ಟೂರ್ನಿ ಮೇಲೆ ಉಗ್ರರ ದಾಳಿ ಆತಂಕದ ಕಾಮೋಡ ಕಾಣಿಸಿಕೊಂಡಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳು ತಂಗಿರುವ ಹೋಟೆಲ್ ಮತ್ತು ಪಂದ್ಯಗಳು ನಡೆಯಲಿರುವ ಸ್ಟೇಡಿಯಂ ಸುತ್ತಮುತ್ತಲಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರೆನ್ನಲಾದ ಶಂಕಿತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.

ಆದರೆ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ‘ಈ ಸುದ್ದಿ ಆಧಾರರಹಿತ’ ಎಂದು ಟ್ವೀಟಿಸಿದ್ದಾರೆ. ಈ ಬೆಳವಣಿಗೆ ನಡುವೆಯೇ ಟೂರ್ನಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಬಂಧಿತ ಶಂಕಿತರು ವಾಂಖೆಡೆ ಕ್ರೀಡಾಂಗಣ, ನಾರಿಮನ್ ಪಾಯಿಂಟ್​ನ ಟ್ರಿಡೆನ್ ಹೋಟೆಲ್ ಮತ್ತು ತಂಡಗಳು ಹೋಟೆಲ್​ನಿಂದ ಸ್ಟೇಡಿಯಂಗೆ ಪ್ರಯಾಣಿಸುವ ಮಾರ್ಗದ ಮಾಹಿತಿಗಳನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದರು ಎಂದು ಮುಂಬೈ ಎಟಿಎಸ್ ಮೂಲಗಳು ತಿಳಿಸಿರುವುದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಈ ಟೆರರ್ ಅಲರ್ಟ್ ಬೆನ್ನಲ್ಲೇ ತಂಡಗಳ ಹೋಟೆಲ್ ಮತ್ತು ಸ್ಟೇಡಿಯಂಗೆ ಭದ್ರತೆ ಹೆಚ್ಚಿಸಲಾಗಿದ್ದು, ಪ್ಯಾರಾ ಮಿಲಿಟರಿ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ತಂಡಗಳು ಹೋಟೆಲ್​ನಿಂದ ಸ್ಟೇಡಿಯಂಗೆ ಪ್ರಯಾಣಿಸುವ ವೇಳೆ ವಿಶೇಷ ಎಸ್ಕಾರ್ಟ್ ನೀಡಲಾಗುತ್ತಿದೆ.

ಆಟಗಾರರು, ಅಂಪೈರ್ ಮತ್ತು ಪಂದ್ಯದ ಅಧಿಕಾರಿಗಳಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ತಂಡಗಳು ಹೋಟೆಲ್​ನಿಂದ ಸ್ಟೇಡಿಯಂಗೆ ಪ್ರಯಾಣಿಸುವ ಮಾರ್ಗದಲ್ಲಿ ಯಾವುದೇ ವಾಹನಗಳ ರ್ಪಾಂಗ್ ನಿಷೇಧಿಸಲಾಗಿದೆ. ಟೂರ್ನಿಯುದ್ದಕ್ಕೂ ಬಾಂಬ್ ಪತ್ತೆ ದಳ, ಕ್ಷಿಪ್ರ ಕಾರ್ಯಾಚರಣೆ ತಂಡ ಮತ್ತು ರಿಸರ್ವ್ ಪೋಲಿಸ್ ಪಡೆಯನ್ನು ನಿಯೋಜಿಸಲಾಗುತ್ತಿದೆ. ಈ ಮುನ್ನ ಭಾರತ-ಶ್ರೀಲಂಕಾ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ನಾಲ್ವರು ಪ್ರೇಕ್ಷಕರು ಮೈದಾನದೊಳಕ್ಕೆ ನುಗ್ಗಿದ ಪ್ರಕರಣದ ಬೆನ್ನಲ್ಲೇ ಬಿಸಿಸಿಐ, ಐಪಿಎಲ್​ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಶೇ. 25 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ. ಮಾ.26ರಂದು ಮುಂಬೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net