ಶಿವ ದೇಗುಲ ಪೂಜಾರಿಯ ಬರ್ಬರ ಹತ್ಯೆ- ದಾನಾಪುರ ಉದ್ವಿಗ್ನ - ಪೊಲೀಸ್​ ವಾಹನಕ್ಕೆ ಬೆಂಕಿ!

bihar
Published on

ಪಾಟನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಪೂಜಾರಿಯೊಬ್ಬರನ್ನು ಗುಂಡಿಕ್ಕಿ ಕೊಂದು ಆತನ ಕಣ್ಣುಗಳನ್ನು ಕಿತ್ತು ವಿರೂಪಗೊಳಿಸಿದ್ದು, ಅವರ ಶವ ಭಾನುವಾರ ಪತ್ತೆಯಾಗುತ್ತಿದ್ದಂತೆ ದಾನಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.

ಮನೋಜ್ ಕುಮಾರ್(32) ಭೀಕರವಾಗಿ ಕೊಲೆಯಾದವರು. ಅವರು ಸೋಮವಾರ ಮಧ್ಯರಾತ್ರಿಯಿಂದ ದಾನಾಪುರ ಗ್ರಾಮದ ಶಿವನ ದೇವಸ್ಥಾನದಿಂದ ನಾಪತ್ತೆಯಾಗಿದ್ದರು. ಮನೋಜ್ ಕುಮಾರ್ ಸಹೋದರ ಅಶೋಕ್ ಬಿಜೆಪಿ ಕಾರ್ಯಕರ್ತರಾಗಿದ್ದವರು.

ಭಾನುವಾರ ಆತನ ಶವ ಪೊದೆಗಳಲ್ಲಿ ಪತ್ತೆಯಾಗಿದ್ದು, ಗುಂಡಿಕ್ಕಿ ಕೊಂದ ಬಳಿಕ ಅವರ ಕಣ್ಣುಗಳನ್ನು ಕಿತ್ತುಹಾಕಲಾಗಿದೆ. ಅವರ ಮರ್ಮಾಂಗ ಮತ್ತಿತರ ಕಡೆ ಗಾಯಗಳಾಗಿವೆ. ಇದು ಕೊಲೆಗಾರರ ವಿಕೃತಮನಸ್ಸಿಗೆ ಸಾಕ್ಷಿಯಾಗಿತ್ತು.

ಬಳಿಕ ಗ್ರಾಮದಲ್ಲಿ ಘರ್ಷಣೆ ಉಂಟಾಗಿದೆ. ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆರೋಪಿಸಿದರು. ಉದ್ರಿಕ್ತರಾಗಿದ್ದ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ.

ಮನೋಜ್ ಕುಮಾರ್ ಅವರ ಕುಟುಂಬ ಮಂಗಳವಾರ ನಾಪತ್ತೆ ದೂರು ನೀಡಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದರು.

ಗೋಪಾಲಗಂಜ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರಾಂಜಲ್ ಮಾತನಾಡಿ, ಗ್ರಾಮದಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಪೊಲೀಸ್ ಪಡೆಯನ್ನು ಕರೆಸಲಾಗಿದೆ. ತನಿಖೆ ಆರಂಭಿಸಲಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net