

ಒಂದೆಡೆ ಭಾರತದ ಗಡಿ ಒತ್ತುವರಿ ಮಾಡಿಕೊಂಡ ನೇಪಾಳದ ಕಿರಿಕಿರಿ, ಇನ್ನೊಂದೆಡೆ ದೂತಾವಾಸದ ಸಿಬ್ಬಂದಿಯನ್ನು ಬಂಧಿಸಿ ಕ್ಯಾತೆ ತೆಗೆದ ಪಾಕ್ ಮತ್ತೊಂದು ಕಡೆ ಗಡಿ ಗಸ್ತಿಗೆ ಅಡ್ಡಪಡಿಸಿದ ಚೀನಾದಿಂದಾಗಿ ಭಾರತ ಮೂರು ಕಡೆಯಿಂದ ತೊಂದರೆ ಎದುರಿಸುತ್ತಿದೆ.
ರಾಘವ ಶರ್ಮ ನಿಡ್ಲೆ, ನವದೆಹಲಿ
ಒಂದು ಕಡೆ ನೇಪಾಳದ ಕಮ್ಯುನಿಸ್ಟ್ ಸರ್ಕಾರ ಭಾರತ-ನೇಪಾಳ ಗಡಿ ಕುರಿತ ಹೊಸ ನಕಾಶೆ ಬಿಡುಗಡೆ ಮಾಡಿ, ಭಾರತದ ಉತ್ತರಾಖಂಡದ ಕೆಲ ಭೂಪ್ರದೇಶಗಳನ್ನು ತನ್ನದೆಂದು ವಾದಿಸುತ್ತಿದೆ. ಚೀನಾದ ಕಮ್ಯುನಿಸ್ಟ್ ಸರ್ಕಾರದ ಪ್ರಭಾವಕ್ಕೊಳಗಾಗಿ ಭಾರತವನ್ನು ಗುರಿ ಮಾಡುವ ಚೀನಾ ತಂತ್ರಗಾರಿಕೆ ಇದರ ಹಿಂದಿರುವುದು ಗುಟ್ಟಿನ ವಿಷಯವೇನಲ್ಲ. ಇವೆಲ್ಲದರ ಮಧ್ಯೆ, ಪಾಕಿಸ್ತಾನವಂತೂ ಚೀನಾ ಪ್ರಭಾವ ಬಳಸಿಕೊಂಡು ಭಾರತ ಮೇಲೆ ಉಗ್ರರನ್ನು ಛೂ ಬಿಡುತ್ತಲೇ ಇದೆ. ಅತ್ತ ಅಮೆರಿಕ ಭಾರತದ ಬೆನ್ನಿಗೆ ನಿಂತಿದ್ದರೆ, ಚೀನಾದಿಂದ ಹೊರಬಂದು ಪ್ರತ್ಯೇಕ ರಾಷ್ಟ್ರವಾಗಿರುವ ತೈವಾನ್ ಕೂಡ ಭಾರತವನ್ನು ನೆಚ್ಚಿಕೊಂಡಿದೆ. ಕರೊನಾ ಹರಡಿಸಿದ ಪಾಪಿ ದೇಶ ಎಂದು ಚೀನಾದ ಮೇಲೆ ಅಂತರಾಷ್ಟ್ರೀಯ ಸಮುದಾಯಗಳು ಮೂದಲಿಸುತ್ತಿರುವಾಗ, ಚೀನಾ ಭಾರತವನ್ನು ಬೆದರಿಸುತ್ತಿರುವುದರ ಹಿಂದಿನ ಉದ್ದೇಶವೇನಿರಬಹುದು ಎಂಬ ಸಹಜ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಕೆಲವೊಂದಿಷ್ಟು ಮಾಹಿತಿ ಇಲ್ಲಿದೆ.
ಹಾಲಿ ವಿವಾದದ ಮೂಲ ರಸ್ತೆ ನಿರ್ಮಾಣವೇ?: ಭಾರತ-ಚೀನಾ ನಡುವಿನ ಬಿಕ್ಕಟ್ಟಿಗೆ ಪ್ಯಾಂಗೊಂಗ್ ತ್ಸೊ ಸರೋವರಕ್ಕೆ ಸಮೀಪದಲ್ಲಿ ಭಾರತ ಪ್ರಮುಖ ರಸ್ತೆ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿರುವುದೇ ಕಾರಣ ಎನ್ನಲಾಗುತ್ತಿದೆ. ಜತೆಗೆ, ಗಾಲ್ವಾನ್ ಕಣಿವೆಯ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡಿ ರಸ್ತೆಯನ್ನು ಸಂರ್ಪಸುವ ಮತ್ತೊಂದು ರಸ್ತೆ ನಿರ್ಮಾಣ ಯೋಜನೆಗೂ ಭಾರತ ಚಾಲನೆ ನೀಡಿರುವುದು ಚೀನಾ ಆಕ್ರೋಶ ಹೆಚ್ಚಿಸಿದೆ. ಪರಿಣಾಮ ವಾಗಿ, ಮೇ 5 ಮತ್ತು 6 ರಂದು ಸುಮಾರು 250 ಚೀನೀ- ಭಾರತೀಯ ಸೈನಿಕರ ಮಧ್ಯೆ ಚಕಮಕಿ ಏರ್ಪಟ್ಟಿತ್ತು ಮತ್ತು ಎರಡೂ ಕಡೆಯ ಸೇನಾಳುಗಳು ಗಾಯಗೊಂಡಿದ್ದರು. ಪ್ಯಾಂಗೊಂಗ್ ತ್ಸೊ ಘಟನೆಯ ನಂತರ ಮೇ 9 ರಂದು ಉತ್ತರ ಸಿಕ್ಕಿಂನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತು.
1975ರಲ್ಲಿ ಏನಾಗಿತ್ತು?: ಭಾರತ-ಚೀನಾ ಮಧ್ಯೆ 1967ರ ನಂತರ ಯಾವುದೇ ಕಾದಾಟ ನಡೆದಿಲ್ಲ ಎಂದು ಅನೇಕರು ಗ್ರಹಿಸಿದ್ದಾರೆ. ಆದರೆ 1975ರಲ್ಲಿ, ಚೀನಾ ಸೇನಾ ಪಡೆಯು ಅಸ್ಸಾಂ ರೈಫಲ್ಸ್ ಸುಪಾಯಿಗಳ ಮೇಲೆ ಅರುಣಾಚಲ ಪ್ರದೇಶದ ತುಲುಂಗ್ ಲಾದಲ್ಲಿ ದಾಳಿ ಮಾಡಿತ್ತು. ಇದರಲ್ಲಿ ನಾಲ್ವರು ಭಾರತೀಯ ಸೇನಾನಿಗಳು ಕೊಲ್ಲಲ್ಪಟ್ಟಿದ್ದರು. ಅಕ್ಟೋಬರ್ 20 ರಂದು ಚೀನಾ ಸೇನೆ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಗಸ್ತು ತಿರುಗುತ್ತಿತ್ತು ಎಂದು ಭಾರತ ಸರ್ಕಾರ ವಾದಿಸಿದರೆ, ಇದಕ್ಕೆ ಭಾರತವೇ ಕಾರಣ ಎಂದು ಚೀನಿಯರು ದೂಷಿಸಿದ್ದರು. ಎಲ್ಎಸಿ ದಾಟಿ ಚೀನಾ ಸೇನಾ ನೆಲೆ ಮೇಲೆ ಭಾರತ ಗುಂಡು ಹಾರಿಸಿದೆ ಎಂದು ಬೀಜಿಂಗ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿತು.
ಚೀನಾ ಲೆಕ್ಕಾಚಾರವೇನಿರಬಹುದು?: 1962ರಲ್ಲಿ ಪೂರ್ವ ಮತ್ತು ಉತ್ತರದ ಗಡಿಗಳಲ್ಲಿ ಭಾರತದ ಮೇಲೆ ಚೀನಾ ದಾಳಿ ನಡೆಸಿತ್ತು. ಕ್ಸಿನ್ಜಿಯಾಂಗ್ ಮತ್ತು ಟಿಬೆಟ್ ನಡುವೆ ರಸ್ತೆ ನಿರ್ಮಾಣ ಕೈಗೆತ್ತಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು. ಭಾರತದ ವ್ಯಾಪ್ತಿಯಲ್ಲಿ (ಈಗ ಅಕ್ಸಾಯ್ ಚಿನ್) 179 ಕಿಲೋ ಮೀಟರ್ ಉದ್ದದ ಮಾರ್ಗವನ್ನು ಜಿ -219 ಎಂದೇ ಕರೆಯಲಾಗುತ್ತದೆ. ಅಂದು ಚೀನೀಯರು ಭಾರತದ ಸಮ್ಮತಿಯಿಲ್ಲದೇ ರಸ್ತೆ ನಿರ್ಮಾಣ ಮಾಡಿದ್ದರು. ಗಾಲ್ವಾನ್ ನದಿಯು ಅತ್ಯುನ್ನತ ಪರ್ವತಶ್ರೇಣಿಯಲ್ಲಿದ್ದು, ಇದು ನದಿಗೆ ಸಮೀಪದಲ್ಲಿರುವ ಶ್ಯೋಕ್ ಭಾಗದಲ್ಲಿ ಭಾರತೀಯರ ವಿರುದ್ಧ ಚೀನಿಯರಿಗೆ ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಡುತ್ತದೆ. ನದಿ ಕಣಿವೆಯನ್ನು ಬಳಸುವ ಮೂಲಕ ಅಕ್ಸಾಯ್ ಚಿನ್ ಪ್ರಸ್ಥಭೂಮಿಯಲ್ಲಿ ಭಾರತದಿಂದ ಬೆದರಿಕೆ ಇದೆ ಎಂದು ಚೀನಾ ಭಾವಿಸುತ್ತಿರುವುದರಿಂದ ಚೀನಿಯರು ಈ ಪ್ರದೇಶವನ್ನು ನಿಯಂತ್ರಿಸಲು ಉತ್ಸುಕರಾಗಿದ್ದಾರೆ. ಡರ್ಬುಕ್-ಶ್ಯೋಕ್ ವಿಲೇಜ್ - ದೌಲತ್ ಬೇಗ್ ಓಲ್ಡಿ ರಸ್ತೆ (ಡಿಎಸ್-ಡಿಬಿಒ ರಸ್ತೆ)ಯಿಂದ ಹೊರಹೊಮ್ಮುವ ಫೀಡರ್ ರಸ್ತೆ ನಿರ್ವಿುಸಲು ಭಾರತ ಪ್ರಯತ್ನಿಸುತ್ತಿದೆ. ಈ ರಸ್ತೆ ಶ್ಯೋಕ್ ನದಿಯುದ್ದಕ್ಕೂ ಸಾಗುತ್ತದೆ ಮತ್ತು ಇದು ಎಲ್ಎಸಿಯಲ್ಲಿ ಮಹತ್ವದ ಪ್ರದೇಶವಾಗಿದೆ. ಇದು ಗಸ್ತಿನ ಪಾಯಿಂಟ್ 14 (ಪಿಪಿ 14)ರಲ್ಲಿ ಬರುತ್ತದೆ.
ಕೆಲ ಪ್ರದೇಶಗಳ ಬಗ್ಗೆ ಭಿನ್ನ ಅಭಿಪ್ರಾಯ: ಗಡಿಯಲ್ಲಿರುವ ಕೆಲವು ಪ್ರದೇಶಗಳ ಬಗ್ಗೆ ಭಾರತ ಮತ್ತು ಚೀನಾಕ್ಕೆ ವಿಭಿನ್ನ ಅಭಿಪ್ರಾಯಗಳಿವೆ. ಈ ವಿವಾದಿತ ಪ್ರದೇಶಗಳಲ್ಲಿ ಎರಡೂ ಸೈನ್ಯಗಳು ಗಸ್ತು ತಿರುಗಲು ಯತ್ನಿಸುತ್ತಿವೆ. ಹೀಗಾಗಿ, ಆಗಾಗ್ಗೆ ಸೈನಿಕರ ನಡುವೆ ಮುಖಾಮುಖಿಯಾಗುತ್ತಲೇ ಇರುತ್ತದೆ. ಭಾರತವು ಗಡಿಯಲ್ಲಿ 23 ಪ್ರದೇಶಗಳನ್ನು ಗುರುತಿಸಿದ್ದು, ಈ ಪ್ರದೇಶಗಳು ಎರಡೂ ಕಡೆಯಿಂದ ವಿವಾದಿತ ಪ್ರದೇಶಗಳು ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಎರಡೂ ಸರ್ಕಾರಗಳ ದಾಖಲೆಗಳ ಪ್ರಕಾರ, ಪ್ಯಾಂಗೊಂಗ್ ತ್ಸೊ ಗಡಿ ಪ್ರದೇಶದ ಬಗ್ಗೆ ಎರಡೂ ದೇಶಗಳ ಮಧ್ಯೆ ವಿಭಿನ್ನ ಗ್ರಹಿಕೆಗಳಿವೆ. ಸದ್ಯ ಪ್ಯಾಂಗೋಂಗ್ ತ್ಸೊ ಮತ್ತು ಅದರ ಉತ್ತರದ ಭಾಗಗಳಲ್ಲಿ ಚೀನಾದ ಸೇನಾ ನಿಯೋಜನೆ ಹೆಚ್ಚಿದೆ. ಆ ಭಾಗದಲ್ಲಿ ಚೀನಾ ಪ್ರತಿಪಾದಿಸುತ್ತಿರುವ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ಸೇನಾಳುಗಳು ಗಸ್ತು ತಿರುಗುತ್ತಿದ್ದಾರೆ. ಈಚಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲೂ ಚೀನಾ ಸೇನಾನಿಗಳು ದೊಡ್ಡ ಸಂಖ್ಯೆಯಲ್ಲಿ ನಿಯೋಜನೆಗೊಂಡಿ ರುವುದನ್ನು ಒಪ್ಪಿಕೊಂಡಿದ್ದರು.