ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನ; ಮಹಾರಾಷ್ಟ್ರ ಸರ್ಕಾರದ ಜತೆಗೆ ಚರ್ಚಿಸಲು ಸಿಎಂ ಸೂಚನೆ|Tense at border

Siddaramaiah
Published on

ಬೆಂಗಳೂರು: ಮರಾಠಿ ಭಾಷೆ ಮಾತನಾಡದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ( tense at border; CM instructs to discuss with Maharashtra government) ಮಾಡಿದ ಘಟನೆ ಮಹಾರಾಷ್ಟ್ರ ಮತ್ತು ಕರ್ನಾಕಟದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಈ ನಡುವೆ ಉದ್ವಿಗ್ನ ಪರಿಸ್ಥಿತಿ ಉಪಶಮನಗೊಳಿಸಲು ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ.

ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹದೇವಪ್ಪ ಹುಕ್ಕೇರಿ ಅವರನ್ನು ಸಾರಿಗೆ ಸಚಿವ ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬಳಿಕ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದರು. ಈ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಮಾಹಿತಿ ನೀಡಿದರು.

ಸಾರಿಗೆ ಸಚಿವರಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬೆಳಗಾವಿಯ ಐಜಿಪಿ ಜತೆ ದೂರವಾಣಿಯಲ್ಲಿ ಮಾತನಾಡಿ ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ.

ಸಿಎಂ ಭೇಟಿ ತರುವಾಯ ಮಾಧ್ಯಮಗಳ ಜತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ನಡೆಸಿರುವ ಹಲ್ಲೆ ಕುರಿತು ಸಿಎಂ ಜತೆ ಚರ್ಚಿಸಿದ್ದೇನೆ. ಘಟನೆ ಬಗ್ಗೆ ಮಾಹಿತಿ ನೀಡಿದ್ದೇನೆ. ಸಿಎಂ ಡಿಜಿಪಿ ಅಲೋಕ್ ಮೋಹನ ಹಾಗೂ ಸಿಎಸ್ ಜತೆ ಮಾತನಾಡಿ ಮಹಾರಾಷ್ಟ್ರ ಸರ್ಕಾರ ಸಂಪರ್ಕಿಸಲು ಹೇಳಿದ್ದಾರೆ.

ಮಹಾರಾಷ್ಟ್ರಕ್ಕೆ ಕರ್ನಾಟಕದ 509 ಟ್ರಿಪ್ ಬಸ್ ಓಡಾಡುತ್ತಿವೆ. ಅದೇ ರೀತಿ ಮಹಾರಾಷ್ಟ್ರದ 130 ಟ್ರಿಪ್ ಬಸ್ ಸಂಚಾರ ಮಾಡುತ್ತಿವೆ. ಘಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಜನ ಆ ಕಡೆಯಿಂದ ಈ ಕಡೆ ಬರಬೇಕು. ಈ ಕಡೆಯಿಂದ ಆ ಕಡೆ ಹೋಗಬೇಕು. ಚಿತ್ರದುರ್ಗ ಒಂದೇ ಒಂದು ಬಸ್‌ಗೆ ಕನ್ನಡಪರ ಸಂಘಟನೆಗಳು ಮಸಿ ಬಳಿದದ್ದು ಬಿಟ್ಟರೆ ನಮ್ಮ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಿವೆ. ಆದರೆ, ಮರಾಠಿಗರು ನಮ್ಮ ಬಸ್‌ಗೆ ಬಣ್ಣ ಬಳಿಯುವುದು, ಕಪ್ಪು ಮಸಿಯಿಂದ ಬರೆಯುವುದನ್ನು ನಿಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಬಸ್‌ಗೆ ಮಹಾರಾಷ್ಟ್ರ ಸರ್ಕಾರ, ಅವರ ಬಸ್‌ಗಳಿಗೆ ನಾವು ರಕ್ಷಣೆ ಕೊಡಬೇಕು. ಏನಾದರೂ ಅನ್ಯಾಯ ಆಗಿದ್ದರೆ ಪ್ರತಿಭಟನೆ ಮಾಡಲಿ. ಆದರೆ, ಬಸ್‌ಗೆ ಕಲ್ಲು ಹೊಡೆಯುವುದು, ಬಣ್ಣ ಬಳಿಸುವುದು ಮಾಡಬಾರದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ವರದಿ ನೀಡಲು ಐಜಿಪಿಗೆ ಸೂಚನೆ

ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ವಲಯ ಐಜಿಪಿ, ಎಸ್‌ಪಿಯವರಿಗೆ ಸೂಚಿಸಿದ್ದೇನೆ. ಬಸ್ ನಿರ್ವಾಹಕನ ಮೇಲೆ ಯಾತಕ್ಕಾಗಿ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಪರಿಶೀಲಿಸಿ ವರದಿ ನೀಡುವಂತೆ ಹೇಳಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಲು ಅವಕಾಶ ನೀಡಲಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸಬೇಕು. ಒಂದುವೇಳೆ ಗಲಾಟೆ ಮಾಡಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಹೇಳಿದ್ದೇವೆ. ಮಹಾರಾಷ್ಟ್ರ ಸರ್ಕಾರದ ಬಸ್‌ಗಳು ಬರುತ್ತಿಲ್ಲ. ಕರ್ನಾಟಕದ ಬಸ್‌ಗಳು ಹೋಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎರಡು ರಾಜ್ಯಗಳ ಬಸ್ ಸಂಚಾರ ನಿಲ್ಲಿಸಲಾಗಿದೆ. ವಾತಾವರಣ ತಿಳಿಯಾದ ಮೇಲೆ ಪ್ರಾರಂಭಿಸಲಾಗುತ್ತದೆ ಎಂದು ಡಾ.ಪರಮೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net