

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ಗೆ ಮೃತಪಟ್ಟವರ ಸಂಖ್ಯೆ ಇಂದು ಬೆಳಗ್ಗೆಯಷ್ಟಕ್ಕೆ 490ಕ್ಕೆ ಏರಿದೆ.
ಈ ಮಧ್ಯೆ ಚೀನಾದಿಂದ ಹೊರಟು ಜಪಾನಿನ ಯೊಕೊಹಾಮಾ ಬಂದರಿಗೆ ತಲುಪಿರುವ ಹಡಗಿನಲ್ಲಿ 10 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದಾಗಿ ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.
ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಸುಮಾರು 3700 ಜನರಿದ್ದರು. ಅದರಲ್ಲಿ ಸದ್ಯ 300 ಜನರ ಆರೋಗ್ಯ ತಪಸಾಣೆ ಮಾಡಲಾಗಿದ್ದು 10 ಜನರಿಗೆ ವೈರಸ್ ಸೋಂಕು ತಗುಲಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈ ಹಡಗಿನಲ್ಲಿದ್ದ ಹಾಂಗ್ಕಾಂಗ್ನ 80 ವರ್ಷದ ವೃದ್ಧ ಜನವರಿ ಕೊನೆಯಲ್ಲಿ ಅನಾರೋಗ್ಯಕ್ಕೀಡಾಗಿದ್ದರು. ಅವರನ್ನು ತಪಾಸಣೆ ಮಾಡಿದಾಗ ಕೊರೊನಾ ವೈರಸ್ ಪತ್ತೆಯಾಗಿತ್ತು. ಅದಾದ ಬಳಿಕ ಹಡಗಿನಲ್ಲಿದ್ದವರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈಗ 10 ಜನರಲ್ಲಿ ವೈರಸ್ ಪತ್ತೆಯಾಗಿದ್ದು ಎಲ್ಲರೂ 50 ವರ್ಷದ ಮೇಲ್ಪಟ್ಟವರೇ ಆಗಿದ್ದಾರೆ. ಅದರಲ್ಲೂ ಓರ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕಟೊ ತಿಳಿಸಿದ್ದಾರೆ.
ಯಾರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆಯೋ ಅವರನ್ನೆಲ್ಲ ಹಡಗಿನಿಂದ ಇಳಿಸಿ ಆಸ್ಪತ್ರೆಗಳಿಗೆ ಕಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಚೀನಾದಲ್ಲಿ 24,300 ಜನರು ವೈರಸ್ನಿಂದ ಸೋಂಕಿತರಾಗಿದ್ದಾರೆ. ಬೇರೆಬೇರೆ ದೇಶಗಳಲ್ಲೂ ಕೂಡ ಕೆಲವರಿಗೆ ವೈರಸ್ ತಗುಲಿದೆ.(ಏಜೆನ್ಸೀಸ್)