ಹತ್ತು ಬ್ಯಾಂಕ್​ಗಳ ವಿಲೀನ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ

bank 4 mar 20
Published on

ನವದೆಹಲಿ: ಸಾರ್ವಜನಿಕ ವಲಯದ ಹತ್ತು ಬ್ಯಾಂಕ್​ಗಳನ್ನು ವಿಲೀನಗೊಳಿಸಿ ನಾಲ್ಕು ಬ್ಯಾಂಕ್​ಗಳನ್ನಾಗಿ ಮಾಡುವ ಆರ್ಥಿಕ ಕ್ಷೇತ್ರದ ಮಹತ್ವದ ಕ್ರಮ ಮುಂದಿನ ಆರ್ಥಿಕ ವರ್ಷದ ಆರಂಭದಿಂದ, ಅಂದರೆ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ವಿಲೀನಗೊಂಡು ರೂಪುಗೊಳ್ಳುವ ಪ್ರತಿ ಬ್ಯಾಂಕ್​ನ ವ್ಯವಹಾರ ತಲಾ ಎಂಟು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಾಗಿರಲಿದೆ. ಆರ್ಥಿಕತೆಗೆ ಬಲ ನೀಡುವ ಉದ್ದೇಶದಿಂದ ಬ್ಯಾಂಕ್​ಗಳ ಮಹಾ ವಿಲೀನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಆಗಸ್ಟ್ 30ರಂದು ಘೋಷಿಸಿದ್ದರು.

ಯಾವ ಯಾವ ಬ್ಯಾಂಕ್ ವಿಲೀನ?: ಇಂಡಿಯನ್ ಬ್ಯಾಂಕ್​ನ್ನು ಅಲಹಾಬಾದ್ ಬ್ಯಾಂಕ್​ನಲ್ಲಿ ವಿಲೀನ ಮಾಡಲಾಗಿದೆ. ಒಬಿಸಿ ಮತ್ತು ಯುನೈಟೆಡ್ ಬ್ಯಾಂಕ್​ನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ, ಆಂಧ್ರಾ ಬ್ಯಾಂಕ್ ಮತ್ತು ಕಾಪೋರೇಷನ್ ಬ್ಯಾಂಕ್​ನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯದಲ್ಲಿ, ಸಿಂಡಿಕೇಟ್ ಬ್ಯಾಂಕ್​ನ್ನು ಕೆನರಾ ಬ್ಯಾಂಕ್​ನಲ್ಲಿ ವಿಲೀನ ಮಾಡಲಾಗಿದೆ. ಮೆಗಾ ವಿಲೀನದಿಂದಾಗಿ 2017ರಲ್ಲಿ 27 ಇದ್ದ ಸಾರ್ವಜನಿಕ ಬ್ಯಾಂಕುಗಳ ಸಂಖ್ಯೆ ಈಗ 12ಕ್ಕೆ ಇಳಿಕೆಯಾಗಿದೆ.

ಅತಿದೊಡ್ಡ ನಿರ್ಣಯ

ಬ್ಯಾಂಕ್​ಗಳ ವಿಲೀನ ಕ್ರಮವನ್ನು ಸ್ವತಂತ್ರ ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿ ತೆಗೆದುಕೊಳ್ಳಲಾಗಿರುವ ಎರಡನೇ ಮಹತ್ವದ ನಿರ್ಣಯ ಎಂದು ಹೇಳಲಾಗುತ್ತಿದೆ. 50 ವರ್ಷಗಳ ಹಿಂದೆ ಇಂದಿರಾ ಗಾಂಧಿ 14 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದರು. ಇದನ್ನು ಬ್ಯಾಂಕಿಂಗ್ ಕ್ಷೇತ್ರದ ಮೊದಲ ಮಹತ್ವದ ನಿರ್ಣಯ ಎಂದು ಪರಿಗಣಿಸಲಾಗುತ್ತಿತ್ತು.

ವಿಲೀನ ತೀರ್ವನವೇಕೆ?

ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿರುವ ಬ್ಯಾಂಕುಗಳ ಗಾತ್ರ ಚಿಕ್ಕದು. ಸಣ್ಣ ಸಣ್ಣ ಬ್ಯಾಂಕುಗಳಾಗಿ ಕಾರ್ಯನಿರ್ವಹಿ ಸುತ್ತಿರುವುದರಿಂದ ಹೀಗಾಗಿದೆ. ಆದರೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ಗೆ ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿಯಾಗಿದ್ದು, ವಿಲೀನದಿಂದ ಸರ್ಕಾರದ ಗುರಿ ತಲುಪುವುದರಲ್ಲಿ ಬ್ಯಾಂಕುಗಳನ್ನೂ ಭಾಗಿದಾರರನ್ನಾಗಿ ಮಾಡಲು ಸಾಧ್ಯವಾಗಲಿದೆ.

ಗ್ರಾಹಕರಿಗೆ ಸಮಸ್ಯೆಯಿಲ್ಲ

ಬ್ಯಾಂಕುಗಳ ವಿಲೀನದಿಂದ ಉದ್ಯೋಗಿಗಳ ಮೇಲಾಗಲಿ ಗ್ರಾಹಕರ ಮೇಲಾಗಲಿ ಹೆಚ್ಚು ಪರಿಣಾಮ ಉಂಟಾಗುವುದಿಲ್ಲ. ಬ್ಯಾಂಕುಗಳ ಹೆಸರು ಬದಲಾಗಲಿದೆ. ಹಿಂದಿದ್ದಕ್ಕಿಂತಲೂ ಉತ್ತಮ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕುಗಳ ಉದ್ಯೋಗಿಗಳಿಗೂ ಇದರಿಂದ ಸಮಸ್ಯೆಯಾಗದು, ಅವರಿಗೆ ಸಿಗುತ್ತಿದ್ದ ಸವಲತ್ತುಗಳು ಹೆಚ್ಚಾಗಲಿದೆ ಎಂದು ಸರ್ಕಾರ ಹೇಳಿದೆ.

ಕಂಪನಿ ಕಾಯ್ದೆಗೆ ತಿದ್ದುಪಡಿ

ಕಂಪನಿಗಳು ಎಸಗುವ ವಿವಿಧ ಆರ್ಥಿಕ ಅಪರಾಧಗಳನ್ನು ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಯಿಂದ ಹೊರತರುವುದು ಸೇರಿ 2013ರ ಕಂಪನಿ ಕಾನೂನಿನಲ್ಲಿ 72 ಬದಲಾವಣೆಗಳನ್ನು ತರುವುದಕ್ಕೆ ಕೇಂದ್ರ ಸಂಪುಟ ಬುಧವಾರ ಸಮ್ಮತಿಸಿದೆ. ಕಂಪನಿಗಳ ಅಪರಾಧಗಳನ್ನು ಕ್ರಿಮಿನಲ್ ಕಾನೂನಿನನ್ವಯ ನಿರ್ವಹಿಸುವುದಕ್ಕೆ ಸಂಬಂಧಿಸಿ ಪ್ರಸ್ತುತ ಕಾನೂನಿನಲ್ಲಿರುವ ನಿಯಮವನ್ನು ಬದಲಾಯಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆಯೆಂದು ಸಚಿವ ಸಂಪುಟ ಸಭೆಯ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ರಾಜಿ ಮಾಡಿಕೊಳ್ಳಬಹುದಾದ 23 ಅಪರಾಧಗಳನ್ನು ಶಿಕ್ಷಾರ್ಹ ಅಪರಾಧ ವ್ಯಾಪ್ತಿಯಿಂದ ಹೊರತರಲಾಗುತ್ತದೆ. ಏಳು ಸ್ವರೂಪದ ಅಪರಾಧಗಳನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ ಎಂದರು. ಕಾರ್ಪೆರೇಟ್ ಸಾಮಾಜಿಕ ಹೊಣೆಗಾರಿಕೆಗೆ (ಸಿಎಸ್​ಆರ್) 50 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಹಣ ಮೀಸಲಿಡಬೇಕಾದ ಕಂಪನಿಗಳು ಸಿಎಸ್​ಆರ್ ಸಮಿತಿ ರಚಿಸುವ ಅಗತ್ಯವಿಲ್ಲ. ಸುಗಮವಾಗಿ ವ್ಯವಹಾರ ನಡೆಸಲು ಅನುಕೂಲವಾಗಲೆಂದು ಈ ಎಲ್ಲ ಬದಲಾವಣೆಗಳನ್ನು ಮಾಡಲಾಗಿದೆ ಎಂದರು.

ಏರ್ ಇಂಡಿಯಾ ಪೂರ್ಣ ಖರೀದಿ ಅವಕಾಶ

ಅನಿವಾಸಿ ಭಾರತೀಯರು (ಎನ್​ಆರ್​ಐ) ಏರ್ ಇಂಡಿಯಾದ ಶೇ. 100 ಷೇರು ಖರೀದಿಸಬಹುದಾಗಿದೆ. ಇದುವರೆಗೆ ಶೇ. 49 ಷೇರು ಖರೀದಿಗಷ್ಟೆ ಅವಕಾಶವಿತ್ತು. ಭಾರತದ ಪ್ರಜೆಗಳಾಗಿರುವ ಎನ್​ಆರ್​ಐಗಳು ಏರ್ ಇಂಡಿಯಾದಲ್ಲಿ ಶೇ. 100 ಷೇರು ಹೊಂದಲು ನೇರ ವಿದೇಶ ಬಂಡವಾಳ ಹೂಡಿಕೆ (ಎಫ್​ಡಿಐ) ನೀತಿಯನ್ನು ಬದಲಾಯಿಸಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಸಂಪುಟ ಸಭೆಯ ನಂತರ ತಿಳಿಸಿದರು. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಮಾರಲು ಸರ್ಕಾರ ಮುಂದಾಗಿರುವ ಸಂದರ್ಭದಲ್ಲೇ ಈ ಪ್ರಕಟಣೆ ಹೊರಬಿದ್ದಿದೆ. ಆರ್ಥಿಕ ಮುಗ್ಗಟ್ಟಿನಲ್ಲಿರುವ ಏರ್ ಇಂಡಿಯಾ ಸಂಸ್ಥೆ ಭಾಗಶಃ ಮಾರಲು ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net