

ತಿ.ನರಸೀಪುರ: ತಾಲೂಕಿನ ಕೇತುಪುರ ಗ್ರಾಮದ ದಲಿತರಿಗೆ ನಿವೇಶನ ಸೇರಿದಂತೆ ಬೇವಿನಹಳ್ಳಿ ಗ್ರಾಮದ ಆಶ್ರಯ ನಿವೇಶನದ ಇ -ಸ್ವತ್ತು ನೀಡಿಕೆ, ಸುಜ್ಜಲೂರು ಗ್ರಾಮದ ಚರಂಡಿ ಅವೈಜ್ಞಾನಿಕ ಕಾಮಗಾರಿ ಹಾಗೂ ಪರಿಶಿಷ್ಟ ಜಾತಿಯವರ ಸ್ಮಶಾನಗಳ ಅಭಿವೃದ್ಧಿಗೆ ಅನುದಾನ ಬಳಕೆಯಲ್ಲಿನ ಸಮಸ್ಯೆ ಸರಿಪಡಿಸುವ ವಿಚಾರದಲ್ಲಿ ಆಡತಾತ್ಮಕ ಸ್ಪಂದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅ.31 ರಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಬೇಕಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ(ಬಣ ರಹಿತ)ಯ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಸಲ್ಲಿಸಿ, ಕಬಿನಿ ಅತಿಥಿ ಗೃಹದಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಈಗಾಗಲೇ ತಿಳಿಸಿದಂತೆ ದಲಿತ ಸಂಘರ್ಷ ಸಮಿತಿಯ ನಿಯೋಗದೊಂದಿಗೆ ತೆರಳಿ ಹಕ್ಕೊತ್ತಾಯ ಪತ್ರದ ರೂಪದಲ್ಲಿ ಸಂಪೂರ್ಣ ದಾಖಲಾತಿಗಳ ಜತೆಗೆ ಸಮಿತಿಯ ಎಲ್ಲ ಬೇಡಿಕೆಗಳ ಈಡೇರಿಕೆಗೆ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿದೆ. ತಹಸೀಲ್ದಾರ್ ಅವರು ನಮ್ಮ ಬೇಡಿಕೆಗಳ ಕುರಿತು ಎಲ್ಲ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನಿಡಿದ್ದಾರೆ. ಹಾಗಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದರು.