

ವಾಷಿಂಗ್ಟನ್: ಜಗತ್ತಿನ ಜನರನ್ನು ಸೆಳೆಯುವ ಮಾಂತ್ರಿಕ ಶಕ್ತಿ ಹೊಂದಿರುವ ಬೃಹತ್ ಆರ್ಥಿಕ ಶಕ್ತಿಯಾದ ಅಮೆರಿಕದಲ್ಲಿ ವಲಸಿಗರಿಗೆ ತಾತ್ಕಾಲಿಕ ತಡೆ ನೀಡಿರುವುದರಿಂದ ವೀಸಾ ನಿರೀಕ್ಷಿತರಲ್ಲಿ ಆತಂಕ ಹೆಚ್ಚಿದೆ. ಈ ರೀತಿ ವೀಸಾ ಆಕಾಂಕ್ಷಿಗಳಲ್ಲಿ ಭಾರತೀಯರ ಸಂಖ್ಯೆ ದೊಡ್ಡದಿದೆ. ‘ಅದೃಶ್ಯ ವೈರಿಯ ದಾಳಿಯ ಹಿನ್ನೆಲೆಯಲ್ಲಿ ಹಾಗೂ ನಮ್ಮ ಮಹಾನ್ ಅಮೆರಿಕದ ಪ್ರಜೆಗಳ ಉದ್ಯೋಗಗಳನ್ನು ರಕ್ಷಿಸುವ ಅಗತ್ಯವಿರುವುದರಿಂದ, ಅಮೆರಿಕಕ್ಕೆ ವಲಸೆ ಬರುವುದನ್ನು ತಾತ್ಕಾಲಿಕವಾಗಿ ರದ್ದುಪಡಿಸುವ ಆದೇಶಕ್ಕೆ ನಾನು ಸಹಿ ಹಾಕಲಿದ್ದೇನೆ’ ಎಂದು ಟ್ರಂಪ್ ಮಂಗಳವಾರ ಬೆಳಿಗ್ಗೆ ಮಾಡಿದ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಟ್ರಂಪ್ ಮಾಡಿರುವ ಸಂಕ್ಷಿಪ್ತ ಟ್ವೀಟ್ ಭವಿಷ್ಯದಲ್ಲಿ ವಲಸೆ ಹೋಗಲಿರುವ ಜನರು ಹಾಗೂ ಅವರ ಕುಟುಂಬಗಳಲ್ಲಿ ಮಾತ್ರವಲ್ಲದೆ ಜಗತ್ತಿನ ನಾನಾ ಭಾಗಗಳಿಂದ ಆಶ್ರಯ ಕೋರುವ (ಅಸೈಲಂ) ಜನರಲ್ಲಿ ಕೂಡ ತಳಮಳ ಸೃಷ್ಟಿಸಿದೆ. ಅಮೆರಿಕದಲ್ಲಿ ನೆಲೆಸುವ ಜನರ ಕನಸಿಗೆ ನಿರಾಸೆ ಮೂಡಿಸಿದೆ.
ಅಮೆರಿಕದಲ್ಲಿರುವ 30 ಲಕ್ಷಕ್ಕೂ ಹೆಚ್ಚು ಅತಿಥಿ ಕಾರ್ವಿುಕರು, ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈ ಪೈಕಿ ಸುಮಾರು 10 ಲಕ್ಷ ಭಾರತೀಯರಿದ್ದಾರೆ. ಅಮೆರಿಕದ ಪೌರತ್ವ, ವಲಸೆ ಸೇವೆಗಳ ಇಲಾಖೆ ಪ್ರಕಾರ ಎಚ್1-ಬಿ ವೀಸಾ ಹೊಂದಿರುವ ನಾಲ್ವರ ಪೈಕಿ ಮೂವರು ಭಾರತೀಯರು. ಅಂದರೆ ಒಟ್ಟು 4.20 ಲಕ್ಷ ಎಚ್1-ಬಿ ವೀಸಾದಾರರಲ್ಲಿ 3.10 ಲಕ್ಷ ಜನರು ಭಾರತೀಯರು.
ತಾತ್ಕಾಲಿಕವಾಗಿ ವೀಸಾ ರದ್ದು ಮಾಡಿರುವುದರ ಹಿಂದೆ ಭವಿಷ್ಯದಲ್ಲಿ ವಲಸೆ ನೀತಿ ಬಿಗಿಗೊಳಿಸುವ ದೂರಗಾಮಿ ಉದ್ದೇಶವಿದೆ. ದೇಶದ ಜನಸಂಖ್ಯೆಯ ಸ್ವರೂಪ ಬದಲಾಗುವುದನ್ನು ತಡೆಯುವುದು ಅದರ ಗುರಿ.
ವಲಸೆ ತಾತ್ಕಾಲಿಕ ರದ್ದತಿ ಬಗ್ಗೆ ಇನ್ನೂ ನಿಯಮ ರೂಪಿಸಿಲ್ಲ. ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವವರಿಗೆ ವಿನಾಯತಿ ನೀಡುವ ಸಂಭವವಿದೆ. ಆದರೆ, ವಲಸೆ ಪ್ರಕ್ರಿಯೆ ಪ್ರಗತಿಯಲ್ಲಿರುವ ಸಾವಿರಾರು ಜನರು, ಮುಖ್ಯವಾಗಿ ಎಚ್1-ಬಿ ವೀಸಾಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳು ಹಾಗೂ ಕಾಯಂ ವಸತಿಗಾಗಿ ಗ್ರೀನ್ ಕಾರ್ಡ್ಗಾಗಿ ಕಾಯುತ್ತಿರುವವರ ಸ್ಥಿತಿ ಏನಾಗಬಹುದೆಂಬ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಅಮೆರಿಕ ಪ್ರತಿವರ್ಷ 11 ಲಕ್ಷ ಕಾನೂನುಬದ್ಧ ವಲಸಿಗರನ್ನು ಬರಮಾಡಿಕೊಳ್ಳುತ್ತದೆ. ಇದು ಯಾವುದೇ ದೇಶಕ್ಕೆ ಹೋಗುವ ವಲಸಿಗರಿಗಿಂತ ಹೆಚ್ಚಿನದ್ದಾಗಿದೆ.
ವಲಸೆ ಮೇಲೆ ತಾತ್ಕಾಲಿಕ ನಿಷೇಧ ಹೇರುವ ಅಮೆರಿಕದ ನಿರ್ಧಾರಕ್ಕೆ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಹಾಗೂ ಜೈವಿಕ ತಂತ್ರಜ್ಞಾನ (ಬಿಟಿ) ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಟ್ರಂಪ್ ಆದೇಶ ಗಾಬರಿ ಹುಟ್ಟಿಸುವಂಥದ್ದು. ಅಮೆರಿಕದಲ್ಲಿ ಹೆಚ್ಚು ಕರೊನಾ ವೈರಸ್ ಪ್ರಕರಣಗಳಿವೆ. ವಲಸಿಗರಿಂದ ವೈರಸ್ ಬರುತ್ತಿಲ್ಲ. ಐಟಿ ಕ್ಷೇತ್ರದ ಮೇಲೆ ಇದರಿಂದ ಭಾರಿ ಪರಿಣಾಮ ಬೀರುತ್ತದೆ’ ಎನ್ನುವುದು ಬೆಂಗಳೂರು ಮೂಲದ ಐಟಿ ಪ್ರಮುಖರೊಬ್ಬರ ಅಭಿಪ್ರಾಯ. ‘ಜಗತ್ತಿನ ಐಟಿ ಸೇವೆಗಳಿಗೆ ಹೆಚ್ಚಿನ ಕೊಡುಗೆ ನೀಡುವ ದೇಶ ಭಾರತ. ಹೀಗಾಗಿ ಸದ್ಯೋಭವಿಷ್ಯದಲ್ಲಿ ಇದು ಇಳಿಕೆಯಾಗಬಹುದು. ಜಾಗತಿಕ ಐಟಿ ವೆಚ್ಚಗಳು ಕಡಿಮೆಯಾಗಬಹುದು. ಇದು ಮುಂದಿನ ಹಲವು ವರ್ಷಗಳಲ್ಲಿ ದೊಡ್ಡ ಪರಿಣಾಮ ಬೀರಲಿದೆ’ ಎಂದು ಅವರೂ ಹೇಳಿದ್ದಾರೆ.