

ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಬದ್ರಿನಾಥ್ ಹೆದ್ದಾರಿ ಬಳಿ ಟೆಂಪೋ ಟ್ರಾವೆಲರ್ ಆಳವಾದ ಕಂದರಕ್ಕೆ ಬಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ. ಟೆಂಪೋವಿನಲ್ಲಿ ಸುಮಾರು 17 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದಿರುವ ಸ್ಥಳದಲ್ಲಿ ಪ್ರಸ್ತುತ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸ್ ತಂಡಗಳು ರಕ್ಷಣಾ ಕಾರ್ಯವನ್ನು ನಡೆಸುತ್ತಿವೆ ಎನ್ನಲಾಗಿದೆ. ಇದುವರೆಗೂ ಇಬ್ಬರು ಗಾಯಗೊಂಡವರನ್ನು ರಕ್ಷಣಾ ತಂಡಗಳು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದೆ ಎಂದು ಹೇಳಲಾಗುತ್ತಿದೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಸಂಭವಿಸಿರುವ ಟೆಂಪೋ ಅಪಘಾತದ ಸುದ್ದಿ ಕೇಳಿ ದುಃಖವಾಗಿದೆ. ಸ್ಥಳೀಯ ಆಡಳಿತ ಮತ್ತು ಎಸ್ಡಿಆರ್ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ. ಮೃತ ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು. (ಏಜೆನ್ಸೀಸ್)