ಭಗವತಿ ಮಹಾಕಾಳಿ ಶೀಘ್ರ ಫಲದಾಯಿನಿ

12 ಎಸ್ಕೆಪಿ 1 ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ
ಶಿಕಾರಿಪುರದ ಭೋಗಿ ಗ್ರಾಮದಲ್ಲಿ ಕಾಳಿಕಾದೇವಿ ದೇವಾಲಯ ಪ್ರವೇಶೋತ್ಸವದ ಧಾರ್ಮಿಕ ಕಾರ್ಯಕ್ರಮವನ್ನು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಚನ್ನಬಸವ ಸ್ವಾಮೀಜಿ, ರಮೇಶ್, ಬಂಗಾರಿನಾಯ್ಕ ಇತರರಿದ್ದರು.
Published on

ಶಿಕಾರಿಪುರ: ಶ್ರೀ ಮಹಾಕಾಳಿಯು ಭಗವತಿಯಾಗಿ ಭಕ್ತರನ್ನು ಸದಾ ಸಲಹುತ್ತಾಳೆ. ಕಲಿಯುಗದಲ್ಲಿ ಮಹಾಕಾಳಿಯು ಶೀಘ್ರ ಫಲದಾಯಿನಿ ಎಂದು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಭೋಗಿ ಗ್ರಾಮದಲ್ಲಿ ಕಾಳಿಕಾ ದೇವಿ ದೇವಾಲಯ ಉದ್ಘಾಟನೆ, ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಹಾಕಾಳಿ ಭೈರವಿಯಾಗಿ ದಶಮಹಾರೂಪದಲ್ಲಿ ದುಷ್ಟಮರ್ದನ ಮಾಡಿ ಶಿಷ್ಟರಕ್ಷಣೆ ಮಾಡುವ ಮೂಲಕ ಸಾಧಕರಿಗೆ ಗುರುಸ್ವರೂಪಿಣಿ ಆಗಿದ್ದಾಳೆ ಎಂದು ತಿಳಿಸಿದರು.

ಪಾರ್ವತಿ ಸ್ವರೂಪದಲ್ಲಿರುವ ತಾಯಿಯು ಮಾತೃವಾತ್ಸಲ್ಯ ಹೊಂದಿರುವ ಮಹಾಮಾತೆ. ತಾಯಿ ಪ್ರತಿಷ್ಠಾಪನೆ ಮಾಡಿದ್ದರಿಂದ ಸುಖ, ಸಮೃದ್ಧಿ ಪ್ರಾಪ್ತವಾಗಲಿದೆ. ಮಹಾಕಾಳಿ ವಾಸವಿರುವ ಜಾಗದಲ್ಲಿ ದುಷ್ಟ ಹಾಗೂ ಕ್ಷುದ್ರ ಶಕ್ತಿಗಳಿಗೆ ಜಾಗ ಇರುವದಿಲ್ಲ ಎಂದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಕಾಳಿಕಾ ಮಾತೆ ಭಕ್ತರಿಗೆ ನೆಮ್ಮದಿ ಬದುಕು ಕರುಣಿಸುತ್ತಾಳೆ. ನಾವು ಸದಾ ಧಾರ್ಮಿಕ ಚಿಂತನೆಯೊಂದಿಗೆ ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು. ಇದರಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ತಾಯಿ ಗರ್ಭದಲ್ಲಿ ಇರುವಾಗಲೇ ಮಗುವಿಗೆ ಸಂಸ್ಕಾರ ಪ್ರಾಪ್ತವಾಗುತ್ತದೆ. ಆ ವೇಳೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿ ಆದರ್ಶ ಪುಣ್ಯ ಪುರುಷರು ಹಾಗೂ ಅಧ್ಯಾತ್ಮದ ಮೌಲ್ಯಗಳನ್ನು ಸ್ಮರಣೆ ಮಾಡಬೇಕು. ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನು ಪಾಲಕರು ಆಚರಿಸಬೇಕು. ಆಗ ಮಕ್ಕಳು ಸಹ ಪಾಲನೆ ಮಾಡುತ್ತಾರೆ ಎಂದು ತಿಳಿಸಿದರು.

ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಕೀಲ ರಮೇಶ್, ಜಿಪಂ ಮಾಜಿ ಸದಸ್ಯ ಬಂಗಾರಿ ನಾಯ್ಕ, ಹಿರೇಜಂಬೂರು ಗ್ರಾಪಂ ಅಧ್ಯಕ್ಷೆ ಜ್ಯೋತಿ ಕುಮಾರ್‌ನಾಯ್ಕ, ಡಿ.ರವಿಕುಮಾರ್, ಗ್ರಾಪಂ ಸದಸ್ಯೆ ಪ್ರೇಮಾ, ಸದಸ್ಯ ಹಬೀಬುಲ್ಲ, ಕಾರ್ಯದರ್ಶಿ ಭೀಮಾನಾಯ್ಕ, ಮಲ್ಲೇಶಪ್ಪ ಬಣಕಾರ್, ಸುಭಾಷ್‌ಚಂದ್ರ ಸ್ಥಾನಿಕ್, ರಾಜಾನಾಯ್ಕ, ಶಿಕ್ಷಕ ರೇವಣ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net