

ಹವಾಮಾನ ಬದಲಾವಣೆ ಹಲವು ಸವಾಲುಗಳನ್ನು ತಂದೊಡ್ಡಿದ್ದು, ಜಾಗತಿಕ ತಾಪಮಾನವಂತೂ ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ‘2024 ಅತ್ಯಂತ ಹೆಚ್ಚು ಉಷ್ಣಾಂಶದ ವರ್ಷವಾಗಿತ್ತು’ ಎಂದು ಕೇಂದ್ರ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದು, ‘1901ರ ನಂತರದ ಅವಧಿಯಲ್ಲಿ ಯಾವ ವರ್ಷವೂ ಇಷ್ಟು ಉಷ್ಣಾಂಶ ಇರಲಿಲ್ಲ’ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ‘2025ರಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಬಲ್ಲಂತಹ ತಾಪಮಾನ ಇರಲಿದೆ’ ಎಂಬ ಎಚ್ಚರಿಕೆಯನ್ನೂ ಜಾಗತಿಕ ಹವಾಮಾನ ಸಂಸ್ಥೆ ಎರಡು ದಿನಗಳ ಹಿಂದೆ ನೀಡಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಗಳು ಸಾಕ್ಷಿ. 2024ರಲ್ಲಿ ಹೆಚ್ಚಿನ ತಾಪಮಾನ ದಾಖಲಾದ ಪರಿಣಾಮ ಬಿಸಿಲ ಬೇಗೆ ತಾಳಲಾರದೆ ಉಷ್ಣಾಘಾತಕ್ಕೆ ಉತ್ತರಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡ ಕಹಿನೆನಪು ಮರೆಯುವ ಮುನ್ನವೇ, ಈ ವರ್ಷವೂ ತಾಪಮಾನ ಹೆಚ್ಚಲಿದೆ ಎಂಬ ಎಚ್ಚರಿಕೆ ಆತಂಕ ತಂದೊಡ್ಡಿದೆ. ರಾಜಸ್ಥಾನದಲ್ಲಂತೂ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿತ್ತು.
2024ರಲ್ಲಿ ವಿಶ್ವದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ದಾಖಲೆ ಮಟ್ಟದಲ್ಲಿ ಹೆಚ್ಚಾಗಿರುವುದರಿಂದ ಭೂಮಿಯ ಮೇಲ್ಮೈ ಮತ್ತು ಜಲರಾಶಿಯಲ್ಲಿನ ತಾಪಮಾನವು ಕೂಡ ಹೆಚ್ಚಳವಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಕೆಲ ತಿಂಗಳುಗಳ ಹಿಂದೆಯೇ ಹೇಳಿದೆ. ಅಲ್ಲದೆ, ತಾಪಮಾನ ಹೆಚ್ಚಳವನ್ನು ತಡೆಯಲು ವಿಶ್ವದ ರಾಷ್ಟ್ರಗಳು ನಡೆಸುತ್ತಿರುವ ಪ್ರಯತ್ನಗಳು ಸಾಕಾಗುತ್ತಿಲ್ಲ ಎಂದು ಎಚ್ಚರಿಸಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ 2050ರ ಹೊತ್ತಿಗೆ ಜನರ ಆದಾಯದಲ್ಲೂ ಶೇಕಡ 19ರಷ್ಟು ಕುಸಿತವಾಗಲಿದೆ ಎಂದು ವೈಜ್ಞಾನಿಕ ನಿಯತಕಾಲಿಕ ‘ನೇಚರ್’ ತಿಳಿಸಿದೆ. ಉಷ್ಣಾಂಶ ಹೆಚ್ಚುತ್ತಿದ್ದಂತೆ ಕೃಷಿ ಉತ್ಪಾದಕತೆಯಲ್ಲಿ ಕುಸಿತ ಕಂಡುಬರಲಿದೆ, ಮಾನವ ಸಂಪನ್ಮೂಲದ ದುಡಿಮೆ ಸಾಮರ್ಥ್ಯ ತಗ್ಗಲಿದೆ ಹಾಗೂ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ. ಇದೆಲ್ಲದರಿಂದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದರಿಂದ ವೈಯಕ್ತಿಕ ತಲಾ ಆದಾಯಕ್ಕೂ ಹೊಡೆತ ಬೀಳಲಿದೆ. ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರಗಳು ಹೆಚ್ಚು ಬಾಧಿತವಾಗಿವೆ.
ಪ್ಯಾರಿಸ್ ಒಪ್ಪಂದದ ಪ್ರಕಾರ ಹಲವು ಸುಧಾರಣೆ ಕೈಗೊಳ್ಳಲಾಗಿದೆಯಾದರೂ, ಈಗಿನ ಸ್ಥಿತಿಗೆ ಈ ಪ್ರಯತ್ನಗಳು ಸಾಕಾಗುತ್ತಿಲ್ಲ. ಮುಖ್ಯವಾಗಿ, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ. ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಕಡೆಗಣಿಸಿವೆ. ಭಾರತದಲ್ಲೂ ಇನ್ನಷ್ಟು ಸುಧಾರಣಾ ಕ್ರಮಗಳು ಕೈಗೊಳ್ಳಬೇಕಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಅಂಶಗಳ ಬಗ್ಗೆ ಸರ್ಕಾರಗಳು ಮತ್ತು ಸಾರ್ವಜನಿಕರು ಕಾಲ ಮಿಂಚಿ ಹೋಗುವ ಮುನ್ನವೇ ಗಮನ ಹರಿಸಿ, ಪರಿಹಾರ ಕ್ರಮಕ್ಕೆ ಮುಂದಾಗುವುದು ಒಳಿತು.