ತೆಲಂಗಾಣ ನೂತನ ಸಿಎಂ ರೇವಂತ್​ ರೆಡ್ಡಿ ಹೆಸರಿನಲ್ಲಿ ಬಯೋಪಿಕ್ ತೆಗೆಯಲು ಮುಂದಾದ ಖ್ಯಾತ ನಿರ್ಮಾಪಕ

Bandla revanth
Published on

ಹೈದರಾಬಾದ್: ಇತ್ತೀಚಿಗೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವು ತೆಲಂಗಾಣದಲ್ಲಿ ಭರ್ಜರಿ ಜಯಗಳಿಸಿ ಅಧಿಕಾರಕ್ಕೇರಿದ್ದು, ಇಂದು (ಡಿಸೆಂಬರ್ 07) ರಾಜ್ಯದ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ರೇವಂತ್​ ರೆಡ್ಡಿ ತೆಲಂಗಾಣದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ಬಯೋಪಿಕ್​ ತೆಗೆಯುವುದಾಗಿ ಟಾಲಿವುಡ್​ನ ಖ್ಯಾತ ನಿರ್ಮಾಕರೊಬ್ಬರು ಘೋಷಿಸಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್ ಲಂಗಾಣದ ಹೊಸ ಸಿಎಂ ರೇವಂತ್ ರೆಡ್ಡಿ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಇತ್ತ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ ರೇವಂತ್​ ರೆಡ್ಡಿ ಅಭಿಮಾನಿಗಳಲ್ಲಿ ನಿರೀಕ್ಷಗೆಳು ಗರಿಗೆದರಿವೆ.

ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಅಮೋಘ ಗೆಲುವಿನ ಹಿಂದೆ ರೇವಂತ್ ರೆಡ್ಡಿ ಅವರ ಪಾತ್ರ ದೊಡ್ಡದಿದೆ. ಹಾಗಾಗಿ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುವ ಬಗ್ಗೆ ಮಾತುಕಥೆ ಶುರುವಾದಂತಿದೆ. ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಈ ವಿಚಾರ ರಿವೀಲ್​ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ.

ಈಗಾಗಲೇ ಅನೇಕ ರಾಜಕೀಯ ನಾಯಕರ ಜೀವನದ ವಿವರಗಳನ್ನು ಆಧರಿಸಿ ಸಿನಿಮಾಗಳು ಮೂಡಿಬಂದಿವೆ. ಹಾಗೆಯೇ, ರೇವಂತ್ ರೆಡ್ಡಿ ಅವರ ಬದುಕಿನ ಕಹಾನಿ ಕೂಡ ಆಸಕ್ತಿಕರ ವಿಚಾರಗಳನ್ನು ಒಳಗೊಂಡಿದೆ. ವಿದ್ಯಾರ್ಥಿ ನಾಯಕನಿಂದ ಆರಂಭವಾಗಿ ತೆಲಂಗಾಣದ ಮುಖ್ಯಮಂತ್ರಿ ಪಟ್ಟಕ್ಕೇರುವ ಹಂತಕ್ಕೆ ಬೆಳೆದ ರೇವಂತ್ ಅವರ ಬದುಕು ಯಾವ ಸಿನಿಮಾ ಕಥೆಗಿಂತಲೂ ಕಡಿಮೆ ಇಲ್ಲ. ಅವರ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಬಂಡ್ಲ ಗಣೇಶ್ ತಿಳಿಸಿದ್ದಾರೆ.

ಬಂಡ್ಲ ಗಣೇಶ್ ಟ್ರೋಲ್

2018ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದು ಅಧಿಕಾರ ಹಿಡಿಯದಿದ್ದಲ್ಲಿ ಬ್ಲೇಡ್​ನಿಂದ ಕತ್ತು ಕೊಯ್ದುಕೊಳ್ಳುವುದಾಗಿ ಹೇಳಿ ಬಳಿಕ ಉಲ್ಟಾ ಹೊಡೆದಿದ್ದರು. ಇದೇ ವಿಚಾರವಾಗಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡಲಾಗಿತ್ತು. ಈಗ 2023ರಲ್ಲಿ ಕಾಂಗ್ರೆಸ್​ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ್ದ ಬೆನ್ನಲ್ಲೇ ಅವರು ಬಯೋಪಿಕ್​ ಮಾಡುವುದಾಗಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net