ತೆಲುಗು ನಟಿ ಹೇಮ ಬಂಧಿಸಿದ ಸಿಸಿಬಿ: ಬುರ್ಕಾ ಧರಿಸಿ ಬಂದಿದ್ದ ನಟಿ

hema
Published on

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ ಹೌಸ್‌ನಲ್ಲಿ ಇತ್ತೀಚೆಗೆ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಅವರನ್ನು ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿರುವುದು, ದಾಳಿಯ ಸಮಯದಲ್ಲಿ ತಮ್ಮ ಹೆಸರನ್ನು ಕೃಷ್ಣವೇಣಿ ಎಂದು ನಮೂದಿಸಿದ್ದಲ್ಲದೇ, ತಪ್ಪಾದ ಮೊಬೈಲ್ ನಂಬರ್ ನೀಡಿರುವುದು, ಡ್ರಗ್ಸ್ ತೆಗೆದುಕೊಳ್ಳುವುದು ಕಾನೂನು ಬಾಹೀರಾ ಎಂದು ಜ್ಞಾನವಿದ್ದರೂ ಡ್ರಗ್ಸ್ ಸೇವನೆ ಮಾಡಿರುವುದು ಮತ್ತು ವಿಡಿಯೋ ಮಾಡುವ ಮೂಲಕ ಪೊಲೀಸರ ತನಿಖೆ ದಾರಿ ತಪ್ಪಿಸುವ ಪ್ರಯತ್ನ ಮಾಡಿರುವ ಹಿನ್ನೆಲೆಯಲ್ಲಿ ನಟಿ ಹೇಮ ಅವರನ್ನು ಬಂಧಿಸಲಾಗಿದೆ ಎಂದು ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಹೇಮಾ ಅವರಿಗೆ ಮೂರು ಬಾರಿ ನೋಟಿಸ್ ಸಿಸಿಬಿ ನೀಡಿತ್ತು. ಅದರಂತೆ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಹೇಮಾ ಅವರ ಬಂಧನ ಮಾಡಲಾಗಿದೆ. ಡ್ರಗ್ಸ್ ಹಾಗೂ ರೇವ್ ಪಾರ್ಟಿ ಆಯೋಜನೆಯಲ್ಲಿ ಹೇಮಾ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫಾರ್ಮ ಹೌಸ್ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವಿಡಿಯೋ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಹೇಮಾ ಪ್ರಯತ್ನಿಸಿದ್ದರು. ನಂತರ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ನಟಿ ಹೇಮಾ ಸೇರಿ ಇತರರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ಈ ಕುರಿತಂತೆ ಎರಡು ಸಲ ನೋಟಿಸ್ ನೀಡಿದ್ದರೂ ಅನಾರೋಗ್ಯದ ನೆಪವೊಡ್ಡಿ ಸಿಸಿಬಿ ಎದುರು ವಿಚಾರಣೆಗೆ ಹೇಮಾ ಹಾಜರಾಗಿರಲಿಲ್ಲ. ಹೀಗಾಗಿ ಸೋಮವಾರ ವಿಚಾರಣೆಗೆ ಹಾಜರಾಗಿದ್ದ ವೇಳೆ ಸಿಸಿಬಿ ಪೊಲೀಸರು ಹೇಮಾ ಅವರನ್ನು ಬಂಧಿಸಿದ್ದಾರೆ.

ನಟಿಗೆ ವೈದ್ಯಕೀಯ ಪರೀಕ್ಷೆ:
ಬಂಧಿತ ಆರೋಪಿ ಹೇಮಾ ಅವರಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ಬೆಳಗ್ಗೆ ಅವರನ್ನು ಆನೇಕಲ್ ಕೋರ್ಟ್‌ಗೆ ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಸಿಸಿಬಿ ಅಧಿಕಾರಿಗಳು ಮನವಿ ಮಾಡಲಿದ್ದಾರೆ.

ಬುರ್ಕಾ ಧರಿಸಿ ಬಂದಿದ್ದ ನಟಿ:
ರೇವ್ ಪ್ರಾರ್ಟಿ ಪ್ರಕರಣದಲ್ಲಿ ಮೊದಲಿನಿಂದಲೂ ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೇಮಾ ಪ್ರಯತ್ನಿಸುತ್ತಿದ್ದರು. ಫಾರ್ಮ ಹೌಸ್ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವಿಡಿಯೋ ಮಾಡಿ ರೇವ್ ಪಾರ್ಟಿಯಲ್ಲಿ ತಾನು ಭಾಗವಹಿಸಿಲ್ಲ ಎಂಬಂತೆ ಬಿಂಬಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಜತೆಗೆ ಮಂಗಳವಾರ ಸಿಸಿಬಿ ವಿಚಾರಣೆಗೆ ಬರುವಾಗ ಅವರು ಬುರ್ಕಾ ಧರಿಸಿ ಬಂದಿದ್ದರು. ಮಾಧ್ಯಮಗಳ ಕಣ್ತಪ್ಪಿಸಲು ಬುರ್ಕಾ ಧರಿಸಿ ವಿಚಾರಣೆಗೆ ಹಾಜರಾಗಿದ್ದರು. ವೈದ್ಯಕೀಯ ಪರೀಕ್ಷೆಗೂ ಸಹ ಬುರ್ಕಾದಲ್ಲಿಯೇ ಅವರನ್ನು ಕರೆದೊಯ್ಯಲಾಗಿತ್ತು.
ಇನ್ನು ಈ ಪ್ರಕರಣದಲ್ಲಿ ಬಂಧಿರಾಗಿದ್ದ ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಅವರ ವಿಚಾರಣೆ ವೇಳೆ ಹೇಮಾ ಸಹ ರೇವ್ ಪಾರ್ಟಿ ಆಯೋಜನೆಯಲ್ಲಿ ಒಬ್ಬರಾಗಿದ್ದರು ಎಂಬುದು ಸಿಸಿಬಿ ತನಿಖೆಯಲ್ಲಿ ಕಂಡು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net