

ಹೈದರಾಬಾದ್: ಎಸ್ಎಸ್ ರಾಜಮೌಳಿ ಅವರ ಮೆಚ್ಚಿನ ಸಿನಿಮಾಟೋಗ್ರಾಫರ್ ಕೆಕೆ ಸೆಂಥಿಲ್ ಕುಮಾರ್ ಅವರ ಪತ್ನಿ ಮತ್ತು ಯೋಗ ತರಬೇತುಗಾರ್ತಿ ರೂಹಿ (ರುಹೀನಾಜ್) ಫೆ.15ರಂದು ನಿಧನರಾದರು. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದಾಗಿ ಬಳಲುತ್ತಿದ್ದರು ಎನ್ನಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೇ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ರೂಹಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. 2009ರಲ್ಲಿ ಸೆಂಥಿಲ್ ಮತ್ತು ರೂಹಿ ಹೊಸ ಜೀವನಕ್ಕೆ ಕಾಲಿಟ್ಟದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.ಕೋವಿಡ್ ಗೆ ತುತ್ತಾದ ನಂತರ ರೂಹಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿರಂತರವಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಅವರ ಆರೋಗ್ಯ ಸುಧಾರಿಸಲಿಲ್ಲ ಎಂದು ಹೇಳಲಾಗುತ್ತಿದೆ. ಕೊನೆಗೂ ಅಂಗಾಂಗ ವೈಫಲ್ಯದಿಂದಾಗಿ ರೂಹಿ ಸಾವು ಕಂಡಿದ್ದಾರೆ.
ರೂಹಿ ಅವರು ಫೆ. 15ರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಅಂತಿಮ ವಿಧಿವಿಧಾನಗಳು (ಶುಕ್ರವಾರ ಫೆ. 16) ಬೆಳಗ್ಗೆ 9 ಗಂಟೆಗೆ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿತ್ತು. ಕೆಲವು ಅಭಿಮಾನಿಗಳು ಬಾಹುಬಲಿ ಸೆಟ್‌ನಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜತೆಗೆ ರೂಹಿ ಮತ್ತು ಸೆಂಥಿಲ್ ಇರುವ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ರೂಹಿ ಅವರ ಸಾವಿಗೆ ನಟ ಪ್ರಭಾಸ್ ನೋವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ಪ್ರಭಾಸ್, ಶೂಟಿಂಗ್ ಮುಗಿಸಿ ಸುಸ್ತಾಗಿದ್ದಾಗ ಅವರ ಯೋಗ ಟಿಪ್ಸ್ ಪಾಲಿಸಿ ರಿಲ್ಯಾಕ್ಸ್ ಆಗುತ್ತಿದೆ. ರೂಹಿ ನನ್ನ ಬೆಸ್ಟ್ ಫ್ರೆಂಡ್ಸ್. ನಾನು ಆ್ಯಕ್ಟೀವ್ ಆಗಿರಲು ಅವರೇ ಕಾರಣ ಎಂದಿದ್ದಾರೆ. ರೂಹಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಟ್ಟೀಟ್ ಮಾಡಿದ್ದಾರೆ.
ಸೆಂಥಿಲ್ ಕುರಿತು: ಸೆಂಥಿಲ್ ರಾಜಮೌಳಿ ತಂಡದಲ್ಲಿ ಹೆಚ್ಚು ನಿರತರಾಗಿರುವ ಸಿನಿಮಾಟೋಗ್ರಾಫರ್ ಎಂದೆನಿಸಿದ್ದು, ಹೆಚ್ಚಿನ ಚಿತ್ರಗಳಿಗೆ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದಾರೆ. ರಾಜಮೌಳಿ ಹಾಗೂ ಸೆಂಥಿಲ್ ಜೊತೆಯಾಗಿ ಕೆಲಸ ಮಾಡಿದ ಹೆಚ್ಚಿನ ಚಿತ್ರಗಳು ಬಂಪರ್ ಹಿಟ್ ಎಂದೆನಿಸಿವೆ. ರಾಜಮೌಳಿ ಚಿತ್ರಗಳ ಹಿಂದಿನ ಹಿರಿಮೆ ಹಾಗೂ ಶ್ರೀಮಂತಿಕೆಯನ್ನು ಮೆಚ್ಚುವ ಅಭಿಮಾನಿಗಳು ಸಿನಿಮಾಟೋಗ್ರಫರ್‌ಗಳಿಗೂ ಮನ್ನಣೆ ನೀಡುತ್ತಾರೆ.
ಅಂತೆಯೇ ಸೆಂಥಿಲ್ ಕೂಡ ಜನಮಾನಸದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಸೆಂಥಿಲ್ ಆರ್‌ಆರ್‌ಆರ್, ಬಾಹುಬಲಿ: ದಿ ಬಿಗಿನಿಂಗ್, ಬಾಹುಬಲಿ: ದಿ ಕನ್‌ಕ್ಲೂಷನ್, ಮಗಧೀರ, ಅರುಂಧತಿ, ಯಮದೊಂಗ, ಛತ್ರಪತಿ, ಈಗಾ ಮತ್ತು ಸೈಯಂತಹ ಬ್ಲಾಕ್‌ಬಸ್ಟರ್‌ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದರು.