

ಶಿವಮೊಗ್ಗ:ರಾಣಿ ಚೆನ್ನಭೈರಾದೇವಿಯ ಹಾಗೂ ರಾಣಿ ಚಂಪಕಾ ಬಗ್ಗೆ ಪಠ್ಯಗಳಲ್ಲಿ ಸೇರಿಸಬೇಕು. ಆ ಮೂಲಕ ನಮ್ಮ ನೆಲದ ನೈಜ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದು ಮೂಡುಬಿದರೆ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಪಿ.ಮಾನ್ವಿ ಕರೂರು ಒತ್ತಾಯಿಸಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಂಗಳವಾರ ಏರ್ಪಡಿಸಿದ್ದ 19ನೇ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ಮತ್ತು ಇತಿಹಾಸ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ನಾವು ಓದಿದ ಇತಿಹಾಸವೇ ಬೇರೆ. ನಡೆದದ್ದೇ ಬೇರೆ ಎಂಬ ಭಾವ ನನ್ನನ್ನು ಆವರಿಸಿದೆ ಎಂದರು.
ಶರಾವತಿ ಹಿನ್ನೀರಿನಲ್ಲಿರುವ ನಮ್ಮ ಕರೂರು ಹೋಬಳಿಯನ್ನು 15ನೇ ಶತಮಾನದಲ್ಲಿ ಆಳಿದ್ದು ಹೆಸರಾಂತ ರಾಣಿ ಚೆನ್ನಭೈರಾದೇವಿ. ಸುಮಾರು 54 ವರ್ಷಗಳ ಕಾಲ ಪೋರ್ಚುಗೀಸರು ಹಾಗೂ ಕೆಳದಿ ಅರಸರ ಜತೆ ಹೋರಾಡಿ ಆಕೆ ರಾಜ್ಯಭಾರ ಮಾಡಿದ್ದಳು. ಶಿಕ್ಷಣ ಸಚಿವರು ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಅವರಲ್ಲಿ ನನ್ನ ಆಗ್ರಹವೆಂದರೆ ಚೆನ್ನಭೈರಾದೇವಿ ವಿಷಯವನ್ನು ಪಠ್ಯದಲ್ಲಿ ಸೇರಿಸಬೇಕೆಂದರು.
ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಿದೆ. ಭಾಷೆ ಉಳಿಯಬೇಕು. ಸಾಹಿತ್ಯ ಸಮಾಜವನ್ನು ಸುಧಾರಿಸಬೇಕು. ಕಲಿಕೆಯ ಆಸಕ್ತಿ, ಗುಣಮಟ್ಟ ಹೆಚ್ಚಾಗಬೇಕು. ಪಠ್ಯ ರಚನೆಯಲ್ಲಿ ಜಾತಿ, ಧರ್ಮಗಳನ್ನು ತಂದು ವಿಷ ಬೀಜವನ್ನು ಬಿತ್ತಿ ಆತಂಕವನ್ನು ಸೃಷ್ಟಿಸುವ ಮನಸ್ಸುಗಳು ಹೆಚ್ಚಾಗಿವೆ. ಪಠ್ಯದ ವಿಷಯದಲ್ಲಿ ರಾಜಕೀಯ ಸಲ್ಲದು. ಪಠ್ಯವನ್ನು ಪಕ್ಷ ಆಧಾರಿತವಾಗಿ ಬದಲಾಯಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಡುಪಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿ ಪವಿತ್ರಾ ಎನ್.ದೇವಾಡಿಗ ಸಮ್ಮೇಳನ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ, ಪ್ರಮುಖರಾದ ಡಿ.ಆರ್.ಶ್ರೀನಿವಾಸ್, ಡಿ.ವಿ.ಸತೀಶ್, ಹೇಮಾ ಇತರರಿದ್ದರು. ಲೇಖಕಿ ಶಿವಮೊಗ್ಗದ ಭವ್ಯಾ ಸುಧಾಕರ್ ಅವರ ಪುಟಾಣಿ ಸಂಚಯ ಪುಸ್ತಕ ಬಿಡುಗಡೆ ಮಾಡಲಾಯಿತು.