

ಅಮೃತಸರ್: ದೂರದರ್ಶನದ ಉಡಾನ್‌ನಲ್ಲಿ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದ ಕಿರುತೆರೆ ನಟಿ ಕವಿತಾ ಚೌಧರಿ ಇಂದು (ಫೆಬ್ರವರಿ 16) ಹೃದಯಾಘಾತದಿಂದ ನಿಧನರಾಗಿದ್ದಾರೆ.
ವರದಿಯ ಪ್ರಕಾರ, ಕವಿತಾ ಅಮೃತಸರದಲ್ಲಿ ಕೊನೆಯುಸಿರೆಳೆದಿದ್ದು, ಇಂದು ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 1980 ಮತ್ತು 1990ರ ದಶಕಗಳಲ್ಲಿ ದೂರದರ್ಶನದಲ್ಲಿ ಹಲವಾರು ಟಿವಿ ಶೋಗಳಲ್ಲಿ ನಟಿಸಿದ ನಂತರ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ಕವಿತಾ ಅವರು, 'ಯುವರ್ ಆನರ್', 'ಅಪ್ರಾದಿ ಕೌನ್' ಮತ್ತು 'ಐಪಿಎಸ್ ಡೈರೀಸ್'ನಂತಹ ಕಾರ್ಯಕ್ರಮಗಳ ಭಾಗವಾಗಿದ್ದರು.
ಕವಿತಾ ಪೊಲೀಸ್ ಅಧಿಕಾರಿಯಾದ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರ ಕಿರಿಯ ಸಹೋದರಿಯಾಗಿದ್ದು, ತನ್ನ ಸಹೋದರಿಯ ಜೀವನದ ಮೇಲೆ ಉಡಾನ್ ಕಾರ್ಯಕ್ರಮವನ್ನು ಮಾಡಿದರು. ಕಾರ್ಯಕ್ರಮವು 1989ರಿಂದ 1991 ರವರೆಗೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ತದನಂತರ ಕೋವಿಡ್-19 (COVID-19) ಸಾಂಕ್ರಾಮಿಕ ಸಮಯದಲ್ಲಿ ದೂರದರ್ಶನದಲ್ಲಿ ಇದನ್ನು ಮರುಪ್ರಸಾರ ಮಾಡಿತು,(ಏಜೆನ್ಸೀಸ್).