ಬೇಕರಿಯಿಂದ ತಂದ ಪಫ್​ನಲ್ಲಿ ಸತ್ತ ಹಾವಿನ ಮರಿ ಕಂಡು ಬೆಚ್ಚಿಬಿದ್ದ ಮಹಿಳೆ: ಪ್ರಶ್ನಿಸಿದ್ರೆ ದರ್ಪದ ಮಾತು! Snake In Snack

Snake In Snack
Published on

Snake In Snack : ತನ್ನ ಮಕ್ಕಳಿಗಾಗಿ ಬೇಕರಿಯಿಂದ ತಂದಿದ್ದ ಪಫ್‌ಗಳಲ್ಲಿ ಒಂದು ಪಫ್​ ಅನ್ನು ಮಹಿಳೆಯೊಬ್ಬರು ತಿನ್ನುವಾಗ ಅದರೊಳಗೆ ಹಾವು ಇರುವುದನ್ನು ನೋಡಿ ಆಘಾತಕ್ಕೊಳಗಾದ ಘಟನೆ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಜಡ್ಚರ್ಲಾದಲ್ಲಿ ನಡೆದಿದೆ.

ಈ ಘಟನೆಯ ಬಗ್ಗೆ ಸಿಐ ಕಮಲಾಕರ್ ಎಂಬುವರು ಮಾಹಿತಿ ನೀಡಿದ್ದು, ಜಡ್ಚರ್ಲಾ ಪಟ್ಟಣದ ಜೌಖಿ ನಗರದ ನಿವಾಸಿ ಶ್ರೀಶೈಲಮ್ಮ ಎಂಬುವರು ಮಂಗಳವಾರ (ಆಗಸ್ಟ್​ 12) ಸಂಜೆ ಸ್ಥಳೀಯ ಬೇಕರಿಯಿಂದ ತಮ್ಮ ಮಕ್ಕಳಿಗೆ ಎಗ್ ಪಫ್ ಮತ್ತು ಕರಿ ಪಫ್ ಖರೀದಿಸಿದರು.

ಬಳಿಕ ಮನೆಗೆ ಬಂದ ಶ್ರೀಶೈಲಮ್ಮ, ಪಫ್​ಗಳ ಪ್ಯಾಕೆಟ್​ ಅನ್ನು ಬಿಚ್ಚಿ, ತನ್ನ ಮಕ್ಕಳಿಗೆ ತಿನ್ನಲು ಕೊಟ್ಟು ತಾನು ಕರಿ ಪಫ್​ ತಿನ್ನುವಾಗ ಏನೋ ಒಂದು ವಸ್ತು ಅವರ ಬಾಯಿಗೆ ಸಿಕ್ಕಿದೆ. ಏನಿರಬಹುದು ಅಂತ ತಿಳಿಯಲು ಕರಿ ಪಫ್ ಮೇಲ್ಭಾಗವನ್ನು ತೆರೆದಾಗ ಆಕೆಯ ಕಣ್ಣಿಗೆ ಸಣ್ಣದಾದ ಸತ್ತ ಹಾವು ಕಂಡಿದೆ. ಅದನ್ನು ನೋಡಿದ ಶ್ರೀಶೈಲಮ್ಮ ಒಂದು ಕ್ಷಣ ಆಘಾತಕ್ಕೆ ಒಳಗಾದರು.

ಇದಾದ ಬಳಿಕ ಶ್ರೀಶೈಲಮ್ಮ ಕರಿ ಪಫ್ ತೆಗೆದುಕೊಂಡು ಸಂಬಂಧಪಟ್ಟ ಬೇಕರಿಗೆ ಹೋಗಿ ವಿಷಯ ತಿಳಿಸಿದರು. ಆದರೆ, ಬೇಕರಿ ಮ್ಯಾನೇಜರ್​ ಉಡಾಫೆ ಉತ್ತರ ನೀಡಿದ್ದಾರೆ. ಇದೆಲ್ಲವೂ ಸಾಮಾನ್ಯ, ನಾವು ಪಡೆದ ತರಕಾರಿಗಳಲ್ಲಿ ಸತ್ತ ಹಾವು ಇದ್ದಿರಬೇಕು ಎಂದು ಉತ್ತರಿಸಿದ್ದಾರೆ. ಇದಾದ ಬಳಿಕ, ಸಂತ್ರಸ್ತೆ ತನ್ನ ಪತಿಯ ಜತೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸಿಐ ಕಮಲಾಕರ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net