ಶಾಸಕರ ಖರೀದಿಗೆ ಯತ್ನ: ಬಿ.ಎಲ್​.ಸಂತೋಷ್​ ಸೇರಿ ಮೂವರಿಗೆ ಲುಕ್​ಔಟ್​ ನೋಟಿಸ್​ ಜಾರಿ

13 santhosh
Published on

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಪಕ್ಷದ ಶಾಸಕರಿಗೆ ಬಿಜೆಪಿಗೆ ಸೇರುವಂತೆ ಹಣದ ಆಮಿಷವೊಡ್ಡಿದ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾದ 'ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್​.ಸಂತೋಷ್ ಸೇರಿ ಮೂವರಿಗೆ ತೆಲಂಗಾಣ ವಿಶೇಷ ತನಿಖಾ ತಂಡ (ಎಸ್​ಐಟಿ) ಮಂಗಳವಾರ ಲುಕ್‌ಔಟ್ ಜಾರಿ ಮಾಡಿದೆ.

ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ.21ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್​.ಸಂತೋಷ್​ಗೆ ನ.19ರಂದೇ ಎಸ್‌ಐಟಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಗೈರಾದರೆ ಬಂಧನದ ಎಚ್ಚರಿಕೆಯನ್ನೂ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್​, ಸಂತೋಷ್​ ಅವರಿಗೆ ನೋಟಿಸಿನ ಪ್ರತಿ ಸಿಗುವವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು. ದೆಹಲಿ ಪೊಲೀಸರ ನೆರವಿನೊಂದಿಗೆ ಸಂತೋಷ್​ಗೆ ನೋಟಿಸ್​ ತಲುಪಿಸಬೇಕು ಎಂದು ಆದೇಶಿಸಿತ್ತು. ಆದರೆ, ವಿಚಾರಣೆಗೆ ನಿನ್ನೆ ಸಂತೋಷ್​ ಗೈರಾಗಿದ್ದು, ಸಂತೋಷ್, ತುಷಾರ್, ಜಗ್ಗು ಸ್ವಾಮಿ ವಿರುದ್ಧ ಎಸ್‌ಐಟಿ ಲುಕ್‌ಔಟ್ ಜಾರಿ ಮಾಡಿದೆ.

ತೆಲಂಗಾಣದ ಸೈಬರಾಬಾದ್ ಪೊಲೀಸರು ಅ.26ರಂದು ಅಜೀಜ್‌ನಗರದ ಫಾರ್ಮ್ ಹೌಸ್ ಮೇಲೆ‌ ದಾಳಿ ಮಾಡಿದ್ದಾಗ 15 ಕೋಟಿ ರೂ. ಪತ್ತೆಯಾಗಿತ್ತು. ಅದನ್ನು ವಶಪಡಿಸಿಕೊಂಡು, ಮೂವರನ್ನು ಬಂಧಿಸಲಾಗಿತ್ತು‌. ಟಿಆರ್‌ಎಸ್‌ನ ನಾಲ್ವರು ಶಾಸಕರ ಖರೀದಿಗೆ ಈ ಹಣ ತರಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೇ ಪ್ರಕರಣ ಸಂಬಂಧ ಈಗ ಸಮನ್ಸ್ ಜಾರಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net