

ಖಮ್ಮಮ್: ಮದುವೆಯಾದ ಎರಡೇ ತಿಂಗಳಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಯಾಗಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯ ಪೆನುಬಲ್ಲಿ ವಲಯದ ನ್ಯೂ ಲಂಕಪಲ್ಲಿಯಲ್ಲಿ ನಡೆದಿದೆ.
ನವ್ಯಾ ರೆಡ್ಡಿ (22) ಕೊಲೆಯಾದ ದುರ್ದೈವಿ. ಕೆಲ ದಿನಗಳ ಹಿಂದೆ ನವ್ಯಾ ರೆಡ್ಡಿ ಕಾಣೆಯಾಗದಿದ್ದಕ್ಕೆ ಎರ್ರುಪಾಳ್ಯಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಪತಿ ನಾಗಶೇಶುರೆಡ್ಡಿ ಸಹ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದ.
ನಾಪತ್ತೆ ಪ್ರಕರಣದಡಿ ತನಿಖೆಗೆ ಇಳಿದ ಪೊಲೀಸರಿಗೆ ಶುಕ್ರವಾರ ನವ್ಯಾ ರೆಡ್ಡಿ ಮೃತದೇಹ ಕುಕ್ಕಲಗುಟ್ಟ ಬಳಿ ಪತ್ತೆಯಾಗಿದೆ. ಇದಾದ ಬೆನ್ನಲ್ಲೇ ನಾಗಶೇಶುರೆಡ್ಡಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ನವ್ಯಾ ರೆಡ್ಡಿಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿದ್ದು, ಆತನೇ ಕೊಲೆ ಮಾಡಿರುವುದು ದೃಢವಾಗಿದೆ.
ಎರಡು ತಿಂಗಳ ಹಿಂದಷ್ಟೇ ನಾಗಶೇಶು ರೆಡ್ಡಿ ಮತ್ತು ನವ್ಯಾ ರೆಡ್ಡಿ ಮದುವೆಯಾಗಿದ್ದರು. ಇಬ್ಬರು ಸಹ ಮಧಿರಾ ವಲಯದ ಎರ್ರುಪಾಳ್ಯಂ ಗ್ರಾಮದವರು. ಮೃತ ನವ್ಯಾ ಸಾಯಿ ಸ್ಫೂರ್ತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿದ್ದಳು. ನಾಗಶೇಶು ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ. (ಏಜೆನ್ಸೀಸ್)