

ಹೈದರಾಬಾದ್: ಜನರ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸುವಲ್ಲಿ ತೆಲಂಗಾಣ ರಾಜ್ಯ ದೇಶದ ಮೂಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ವಿದ್ಯುತ್ ಸರಬರಾಜಿನಲ್ಲಿ ತೆಲಂಗಾಣ ದೇಶದಲ್ಲೇ ನಂಬರ್ ಒನ್ ಆಗಿದೆ ಎಂದು ನೀತಿ ಆಯೋಗವೇ ಹೇಳಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಕಲ್ಯಾಣ ಕಾರ್ಯಕ್ರಮಗಳಲ್ಲೂ ಅಗ್ರ ಸ್ಥಾನದಲ್ಲಿ ನಿಂತಿದೆ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಜ್ಯ ಸರ್ಕಾರ. ಗ್ರಾಮೀಣ ಅಭಿವೃದ್ಧಿಯಲ್ಲೂ ದೇಶದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.
ಲಾಭದಾಯಕ ಬೆಳೆಗಳನ್ನು ಬೆಳೆಸುವಲ್ಲಿ ತೆಲಂಗಾಣ ಇಡೀ ದೇಶಕ್ಕೆ ಮಾದರಿಯಾಗಿದೆ. 5,000 ಎಕರೆಗಳ ಕ್ಲಸ್ಟರ್ ಸ್ಥಾಪಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ವಿಸ್ತರಣಾ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ರೈತರಿಗೆ ನೆರವಾಗುತ್ತಿದೆ.
ಆರೋಗ್ಯ ಸೇವೆಯಲ್ಲೂ ಮೊದಲು: ನಾಗರಿಕರಿಗೆ ಸರ್ಕಾರಿ ಆರೋಗ್ಯ ಸೇವೆ ಒದಗಿಸುವಲ್ಲಿ ತೆಲಂಗಾಣ ಮುಂಚೂಣಿಯಲ್ಲಿದೆ ಎಂದು ನೀತಿ ಆಯೋಗವೇ ಪ್ರಮಾಣೀಕರಿಸಿರುವುದು ರಾಜ್ಯದ ಘನತೆಯನ್ನು ಹೆಚ್ಚಿಸಿದೆ. ಜಾಗತಿಕವಾಗಿ ಸುಗಮ ಜೀವನ ನಡೆಸಬಲ್ಲ ನಗರಗಳ ಪೈಕಿ ತೆಲಂಗಾಣ ರಾಜಧಾನಿ ಹೈದರಾಬಾದ್ ನಂಬರ್ ಒನ್ ನಗರವಾಗಿದೆ ಎಂದು ಜೆಎಲ್ಎಲ್ ಹೇಳಿದೆ.